ಡಿಜಿಪಿ ಗಮನ ಸೆಳೆದ ಮುಸ್ಲಿಂ ನಿಯೋಗ

20mdkj3 - Copy
Published on

ಮಡಿಕೇರಿ: ಅವಹೇಳನ ಪ್ರಕರಣದಲ್ಲಿ ಮುಸ್ಲಿಮರ ತೇಜೋವಧೆ ಮಾಡಿದವರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಕೊಡಗಿನ ಮುಸ್ಲಿಂ ಮುಖಂಡರ ನಿಯೋಗ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದೆ. ಕಾವೇರಿ ಮತ್ತು ಕೊಡವತಿಯರನ್ನು ಅವಹೇಳನ ಮಾಡಿದ ತಪ್ಪಿತಸ್ಥನನ್ನು ಗಡಿಪಾರು ಮಾಡುವಂತೆ ಕೋರಿದ್ದಾರೆ.

ಬೆಂಗಳೂರಿನಲ್ಲಿ ಡಿಜಿಪಿ ಪ್ರವೀಣ್ ಸೂದ್, ಅಪರಾಧ ವಿಭಾಗದ ಎಡಿಜಿಪಿ ಸೀಮಾ ಲಾಟ್ಕರ್ ಅವರನ್ನು ಬುಧವಾರ ಪ್ರತ್ಯೇಕವಾಗಿ ಭೇಟಿ ಮಾಡಿದ ಪ್ರಕರಣದ ಕುರಿತು ಗಮನ ಸೆಳೆದಿದ್ದಾರೆ. ನಿಯೋಗದಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಉಪಾಧ್ಯಕ್ಷ ಕೆ.ಎಂ. ಅಬ್ದುಲ್ ರಹಿಮಾನ್, ಮಾಜಿ ಸದಸ್ಯ ಕೆ.ಎಂ. ಭಾವ, ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಅಧ್ಯಕ್ಷ ಪಿ.ಎ. ಹನೀಫ್, ಐಮಂಗಲ ಮುಸ್ಲಿಂ ಜಮಾಅತ್ ಮಾಜಿ ಅಧ್ಯಕ್ಷ ಕೋಳುಮಂಡ ರಫೀಕ್ ಇದ್ದರು.

ಜನಾಂಗೀಯ ಸಂಘರ್ಷಕ್ಕೆ ಸಂಚು ರೂಪಿಸಿದ್ದು, ಇದರ ಹಿಂದೆ ಪ್ರಭಾವಿ ಜಾಲ ಕಾರ್ಯನಿರ್ವಹಿಸಿರುವ ಶಂಕೆ ಇದೆ. ಆದ್ದರಿಂದ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕೆಂದರು ಒತ್ತಾಯಿಸಿದರು. ಮುಸ್ಲಿಂ ವ್ಯಕ್ತಿ ಮಾಡಿದ್ದಾರೆಂದು ಪ್ರಚಾರವಾಗಿದ್ದರಿಂದ ವ್ಯಾಪಕ ವಾಗಿ ಮುಸ್ಲಿಮರ ತೇಜೋವಧೆ ಮಾಡಲಾಗಿದೆ.

ಅವಹೇಳನ ಪ್ರಕರಣಕ್ಕೆ ಸಂಬಂಧವೇ ಇಲ್ಲದ ೧೭ ವರ್ಷ ಪ್ರಾಯದ ಸಿದ್ದಾಪುರದ ಯುವಕನ ಛಾಯಾಚಿತ್ರ ಹಾಗೂ ಹೆಸರು ಸಾಮಾಜಿಕ ಜಾಲತಾಣದಲ್ಲಿ ಹಾಕುವುದರ ಮೂಲಕ ಮಾನಿಸಿಕ ಹಿಂಸೆ ನೀಡಿದ್ದಾರೆ. ಈ ಬಗ್ಗೆ ಯುವಕನ ತಂದೆ ನೀಡಿರುವ ದೂರಿಗೆ ಸಂಬಂಧಿಸಿದ್ದಂತೆ ಇದುವರೆಗೂ ಕ್ರಮ ಕೈಗೊಂಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಯುವಕನ ಛಾಯಾಚಿತ್ರ ಹಂಚಿಕೊಂಡವರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಸೂಕ್ತ ರಕ್ಷಣೆ ಒದಗಿಸಬೇಕೆಂದು ಕೋರಿದರು.

ಕೊಡವರ ವಿರುದ್ಧ ಜನಾಂಗೀಯ ನಿಂದನೆ ಮಾಡಿ, ಅದನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿರುವ ಹಿಂದೆ ವ್ಯವಸ್ಥಿತವಾದ ಷಡ್ಯಂತರವಿದೆ. ಕೋಮುಗಲಭೆ ಸೃಷ್ಟಿಸಲು ಮಾಡಲಾಗಿರುವ ಈ ಸಂಚಿನಲ್ಲಿ ಸಮಾಜಘಾತುಕ ಮತ್ತು ವಿದ್ವಾಂಸಕ ಶಕ್ತಿಗಳ ಕೈವಾಡವಿದೆ. ಕೊಡಗಿನಲ್ಲಿ ಹಿಂದಿನಿಂದಲೂ ಕೋಮುಗಲಭೆ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ. ಜನಾಂಗೀಯ ನಿಂದನೆ ನೆಪವಾಗಿಸಿಕೊಂಡು ತೀವ್ರ ಪ್ರತಿಭಟನೆ ಮೂಲಕ ಗಲಭೆ ನಡೆಸುವ ಹುನ್ನಾರ ನಡೆದಿತ್ತು. ಬಂಧಿತ ಮುಸ್ಲಿಂ ಅಲ್ಲ ಎಂದು ಬಹಿರಂಗಗೊಂಡ ಕಾರಣದಿಂದ ಪ್ರತಿಭಟನೆ ರದ್ದುಗೊಳಿಸಲಾಗಿದೆ. ಇದರಿಂದ ಈ ಪ್ರತಿಭಟನೆಯ ಹಿಂದಿನ ಉದ್ದೇಶ ಅರ್ಥೈಸಬಹುದೆಂದು ಗಮನ ಸೆಳೆದಿದ್ದಾರೆ.

ಬಂಧಿತ ಯುವಕನ ರಾಜಕೀಯ ಪ್ರಭಾವವಿರುವ ಕೌಟುಂಬಿಕ ಹಿನ್ನೆಲೆಯವನಾದ್ದರಿಂದ ಮುಂದೆ ಸಾಕ್ಷ್ಯ ನಾಶ ಪಡಿಸುವ ಸಾಧ್ಯತೆಗಳಿವೆ ಎಂದು ಕಳವಳ ವ್ಯಕ್ತ ಪಡಿಸಿದರು. ಸಮಗ್ರ ತನಿಖೆಗೊಳಪಡಿಸಿ ಸೂಕ್ತ ನ್ಯಾಯ ಒದಗಿಸುವುದಾಗಿ ಡಿಜಿಪಿ ಭರವಸೆ ನೀಡಿದ್ದಾರೆ ಎಂದು ನಿಯೋಗದಲ್ಲಿದ್ದವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net