ಜಂತುಹುಳು ಮಾತ್ರೆ ಅಡ್ಡ ಪರಿಣಾಮ ಬೀರದು: ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ.ಪಿ.ಸಿ.ಕುಮಾರಸ್ವಾಮಿ

7
Published on

ಮೈಸೂರು: ಜಂತುಹುಳುವನ್ನು ನಿಯಂತ್ರಿಸಿದರೆ ಶೇ.70ರಷ್ಟು ರಕ್ತ ಹೀನತೆ (ಅನೀಮಿಯಾ) ನಿಯಂತ್ರಿಸಬಹುದು ಎಂದು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ.ಪಿ.ಸಿ.ಕುಮಾರಸ್ವಾಮಿ ಹೇಳಿದರು.

ಜಿಲ್ಲಾಡಳಿ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)ದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಸೇರಿದಂತೆ ಬಹುತೇಕರಲ್ಲಿ ರಕ್ತಹೀನತೆ ಕಂಡು ಬರುತ್ತಿದೆ. ಅದನ್ನು ನಿಯಂತ್ರಿಸಿ ದೇಶವನ್ನು ಅನೀಮಿಯಾ ಮುಕ್ತ ಭಾರತನ್ನಾಗಿ ಮಾಡಲು ಕ್ರಮ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಜಂತುಹುಳುವನ್ನು ನಿಯಂತ್ರಿಸಿದರೆ ಶೇ.70ರಷ್ಟು ರಕ್ತಹೀನತೆ ನಿಯಂತ್ರಿಸಬಹುದು ಎಂದರು.

ದೇಶದಾದ್ಯಂತ ಜಂತುಹುಳು ನಿವಾರಣಾ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಜಿಲ್ಲೆಯಲ್ಲಿನ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜು ಮತ್ತು ಪ್ರಥಮ ವರ್ಷದ ಪದವಿ ಕಾಲೇಜಿನಲ್ಲಿ ಕಾರ್ಯಕ್ರಮ ಏರ್ಪಸಲಾಗುತ್ತಿದೆ. ಈ ಮೂಲಕ 1 ರಿಂದ 19 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಜಂತುಹುಳುವಿನ ಮಾತ್ರೆ ಹಾಗೂ ಅದರಿಂದಾಗುವ ಉಪಯೋಗದ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಸ್ತುತ 2024 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 7,01,228 ಮಕ್ಕಳಿಗೆ ಜಂತುಹುಳು ಮಾತ್ರೆಯನ್ನು ವಿತರಿಸಿ, ಇದರಿಂದ ಜಂತುಹುಳು ನಿವಾರಣೆ ಮಾಡಲಾಗುತ್ತದೆ. ಮಕ್ಕಳ ಆರೋಗ್ಯದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬೀರದ ರೀತಿಯಲ್ಲಿ ಮಾತ್ರೆ ತಯಾರಿಸಲಾಗಿದ್ದು, ಮಕ್ಕಳು ನಿಶ್ಚಿಂತೆಯಿಂದ 6 ತಿಂಗಳಿಗೊಮ್ಮೆ ಮಾತ್ರೆ ತೆಗೆದುಕೊಳ್ಳಬೇಕು ಎಂದರು.

ರಕ್ತ ಹೀನತೆಯಿಂದ ಮಕ್ಕಳಲ್ಲಿ ಹೊಟ್ಟೆನೋವು, ಆಯಾಸ ಹಾಗೂ ಇನ್ನಿತರ ಸಮಸ್ಯೆಗಳು ಕಂಡು ಬರುತ್ತವೆ. ಜಂತುಹುಳು ಕಡಿಮೆಯಾದರೆ ರಕ್ತ ಹೀನತೆ ತಡೆಗಟ್ಟಲು ಸಹಕಾರಿಯಾಗುತ್ತದೆ. ಹಾಗಾಗಿ ಸದೃಢ ಅರೋಗ್ಯವಂತ ಭಾರತವನ್ನು ನಿರ್ಮಿಸಲು ಆರೋಗ್ಯದ ಸಲಹೆಯನ್ನು ಪಾಲಿಸಬೇಕು ಎಂದು ಹೇಳಿದರು.

ಪ್ರತಿಯೊಬ್ಬರೂ ಅರೋಗ್ಯವಂತರಾಗಿರಲು ಮುಖ್ಯವಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸೇವಿಸುವ ಆಹಾರ, ಹಣ್ಣು ಹಾಗೂ ಕುಡಿಯುವ ನೀರು ಶುದ್ಧವಾಗಿದೆಯೇ ಎಂದು ಪರೀಕ್ಷಿಸಿ ನಂತರ ಸೇವಿಸಬೇಕು. ಶೌಚದ ನಂತರ, ಊಟಕ್ಕೆ ಮೊದಲು ಹಾಗೂ ಊಟದ ನಂತರ ಕೈ ಸ್ವಚ್ಛಗೊಳಿಸಿಕೊಳ್ಳಬೇಕು. ಅಲ್ಲದೆ ನಮ್ಮ ಸುತ್ತ-ಮುತ್ತಲಿನ ವಾತಾವರಣವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಆಗಿದ್ದಾಗ ಮಾತ್ರವೇ ನಮ್ಮ ಅರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಸಲಹೆ ನೀಡಿದರು.

ಜಿಲ್ಲೆಯಾದ್ಯಂತ ಅರೋಗ್ಯ ಸಿಬ್ಬಂದಿ, ವೈದ್ಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ 4000 ಕ್ಕೂ ಅಧಿಕ ಅಧಿಕಾರಿಗಳಿಂದ ಶಾಲಾ-ಕಾಲೇಜಿಗೆ ತೆರಳಿ ಶುದ್ಧ ಕುಡಿಯುವ ನೀರು ಹಾಗೂ ಮಕ್ಕಳ ಅರೋಗ್ಯ ಹಾಗೂ ಜಂತುಹುಳುವಿಗೆ ಸಂಬಂಧಿಸಿದಂತೆ ಸರ್ವೇ ಮಾಡಲಾಗುತ್ತಿದೆ. ಸಮಸ್ಯೆಗಳು ಕಂಡುಬಂದರೆ ಚಿಕಿತ್ಸೆ ನೀಡಲಾಗುವುದು, ಪ್ರತಿ ಮಕ್ಕಳು ಅಧಿಕಾರಿಗಳೊಂದಿಗೆ ಸ್ವಂದಿಸಿ ಸಮಸ್ಯೆಯನ್ನು ಮುಕ್ತವಾಗಿ ಹೇಳಿಕೊಳ್ಳಬೇಕು ಎಂದರು.

ಮೈಸೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಅನಂತರಾಜು ಮಾತನಾಡಿ, ಮಕ್ಕಳಿಗೆ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಹಲವಾರು ಸಮಸ್ಯೆ ಎದುರಾಗುತ್ತವೆ. ಅವುಗಳನ್ನು ಹೋಗಲಾಡಿಸಿ, ತೊಂದರೆಯಾಗದಂತೆ ನೋಡಿಕೊಳ್ಳಲು ದು ಉತ್ತಮ ಮಾರ್ಗ ಎಂದರು.

ಮಕ್ಕಳು ಮಾತ್ರೆಯನ್ನು ಸೇವಿಸಿ, ಅರೋಗ್ಯಾಧಿಕಾರಿಗಳ ಸೂಚನೆ ಪಾಲಿಸಿ ಆರೋಗ್ಯವಂತರಾಗಬೇಕು. ಸರ್ಕಾರದ ಮಹತ್ವಕಾಂಕ್ಷಿಯ ಯೋಜನೆಗೆ ಕೈ ಜೋಡಿಸಿದರೆ ಮಾತ್ರವೇ ಅರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ವಿದ್ಯಾರ್ಥಿಗಳಿಗೆ ಜಂತು ಹುಳುವಿನ ಮಾತ್ರ ವಿತರಿಸಿ, ಕೈ ಸ್ವಚ್ಛತೆಯ ಬಗ್ಗೆ ಪ್ರಾಯೋಗಿಕವಾಗಿ ಪ್ರದರ್ಶನ ನೀಡಿದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಸಿರಾಜ್, ಕಾರ್ಯಕ್ರಮಾಧಿಕಾರಿ ಗೋಪಿನಾಥ್, ಅರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net