

ತುಮಕೂರು: ಕರ್ನಾಟಕದಲ್ಲಿ 30-35 ವರ್ಷಗಳ ಹಿಂದೆ ಜಾನಪದದ ಹೆಚ್ಚು ಚಟುವಟಿಕೆಗಳು ನಡೆಯುತ್ತಿದ್ದು ಇತ್ತೀಚಿಗೆ ಆಧುನೀಕರಣಗೊಂಡು ಎಲ್ಲವೂ ಮರೆಯಾಗುತ್ತಿವೆ ಎಂದು ಸಾಹಿತಿ ಡಾ. ಅಗ್ರಹಾರ ಕೃಷ್ಣಮೂರ್ತಿ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಕುಮಾರವ್ಯಾಸ ಅಧ್ಯಯನ ಪೀಠದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಡಾ. ಡಿ. ವಿ. ಜಿ. ಕನ್ನಡ ಅಧ್ಯಯನ ಕೇಂದ್ರದ ಸಹಪ್ರಾಧ್ಯಾಪಕ ಡಾ.ಪಿ.ಎಂ. ಗಂಗಾಧರಯ್ಯ ಅವರ "ದೇವುಗಾನಿಕೆ' ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮೌಖಿಕ ಕಾವ್ಯಗಳು, ಕಥೆಗಳು, ನಮ್ಮ ಚರಿತ್ರೆಯನ್ನು ಇಂದಿಗೂ ಹಿಡಿದಿಟ್ಟುಕೊಂಡಿರುವ ಪರಿಯನ್ನು ದೇವುಗಾನಿಕೆ ಕೃತಿ ಪರಿಚಯಿಸುತ್ತದೆ ಎಂದರು.
ಮೂವತ್ತು ವರ್ಷಗಳ ದೀರ್ಘ ಕ್ಷೇತ್ರಕಾರ್ಯದ ಫಲವಾಗಿ ಹುಟ್ಟಿಕೊಂಡಿರುವ "ದೇವುಗಾನಿಕೆ' ಕೃತಿಯಲ್ಲಿ ಹೆಣ್ಣು- ಗಂಡು ಇಬ್ಬರನ್ನೂ ಸಮಾನವಾಗಿ ಕಾಣಲಾಗಿದೆ. ಅಂಚಿಗೆ ಸರಿದ ಅನೇಕ ಸಮುದಾಯಗಳ ಚರಿತ್ರೆಗಳನ್ನು ಹೊರ ತರುವುದರಲ್ಲಿ ಕೃತಿಕಾರರು ಮಾಡಿರುವ ಕಾರ್ಯ ಶ್ಲಾಘನೀಯ. ಈ ಕೃತಿಯಲ್ಲಿ ಸ್ತ್ರೀ ದೇವತೆಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಲಾಗಿದೆ. ಒಟ್ಟು ಏಳು ಮಾತೃ ದೇವತೆಗಳ ಗುಂಪನ್ನು ಪರಿಚಯಿಸಲಾಗಿದೆ. ಸಿದ್ದರಬೆಟ್ಟದ ಅಸ್ಮಿತೆ ಮತ್ತು ಸತ್ಯ ಘಟನೆಗಳು, ಕ್ಷೇತ್ರವಾರು ಜಾನಪದ ಸಂಸ್ಕತಿಯನ್ನು ಅಭಿವ್ಯಕ್ತಿಸಲಾಗಿದೆ ಎಂದು ತಿಳಿಸಿದರು,
ಜಾನಪದ ಕಲೆಯು ಬದುಕಿನ ಎಲ್ಲಾ ತಲ್ಲಣಗಳನ್ನು ಬಿಂಬಿಸುತ್ತದೆ. ಜಾನಪದದ ಆಳ ಅಗಲ ಅಪಾರವಾದದ್ದು. ನೆಲಮೂಲ ಸಂಸ್ಕತಿಯನ್ನು ಎಲ್ಲೆಡೆ ತಲುಪಿಸುವ ಪ್ರಯತ್ನ ಇದಾಗಿದೆ ಎಂದು ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್. ವಿಶ್ವನಾಥ್ ಹೇಳಿದರು.
ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿದ ಸ್ಥಳಿಯ ಜಾನಪದದ ಬಗ್ಗೆ ಕೃತಿ ರಚನೆಯಾಗಿರುವುದು ಹೆಮ್ಮೆಯ ವಿಷಯ. ಜನಪದ ಸಾಹಿತ್ಯ ಇತ್ತೀಚಿನ ದಿನಗಳಲ್ಲಿ ಅಳಿವಿನಂಚಿಗೆ ಸಾಗುತ್ತಿದೆ. ಗ್ರಾಮ ದೇವತೆಗಳು, ಗ್ರಾಮೀಣ ಪ್ರದೇಶದ ಸೊಗಸು ಕಡಿಮೆ ಆಗುತ್ತಿದೆ. ಯುವಕರು ನಮ್ಮ ಸಂಸತಿ ಹಾಗೂ ಜಾನಪದ ಸಾಹಿತ್ಯವನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಹೋಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ಪ್ರಸನ್ನಕುಮಾರ್, ಹಾಸನದ ಜೀವವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಎನ್. ವೆಂಕಟೇಶ್, ಕೃತಿಕಾರ ಡಾ. ಪಿ. ಎಂ. ಗಂಗಾಧರಯ್ಯ ಉಪಸ್ಥಿತರಿದ್ದರು.