ದೇವುಡು ಕೊಡುಗೆ ಸ್ಮರಣೀಯ

28 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಾನ್ ಚೈತನ್ಯ ಹೊಂದಿದ್ದ ದೇವುಡು ಕನ್ನಡ ಸಾಹಿತ್ಯಕ್ಕೆ ಅಪರಿಮಿತ ಕೊಡುಗೆ ಕೊಟ್ಟವರು. ಮಾತೃ ಭಾಷೆ ತೆಲಗು ಆಗಿದ್ದರೂ ಕನ್ನಡವೇ ಜೀವ ಭಾಷೆಯಾಗಿತ್ತು. ಕನ್ನಡಿಗರಾಗಿಯೇ ಬೆಳೆದು ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದವರು ಎಂದು ಜೆಎಸ್‌ಎಸ್ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಶಿವಾನಂದ ಟವಳಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ದೇವುಡು ನರಸಿಂಹಶಾಸ್ತ್ರಿ ದತ್ತಿ ನಿಮಿತ್ತ ಗುರುವಾರ ಏರ್ಪಡಿಸಿದ್ದ ದೇವುಡು ಅವರ ಸಾಹಿತ್ಯ ಮತ್ತು ವ್ಯಕ್ತಿತ್ವ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ದೇವುಡು ವಿದ್ಯಾರ್ಥಿ ದೆಸೆಯಿಂದಲೇ ಚತುರ್‌ಭಾಷಾ ಪ್ರವೀಣರಾಗಿದ್ದರು. ಬಹುಮುಖ ವ್ಯಕ್ತಿತ್ವ ಹೊಂದಿದ್ದ ಇವರು ಆದರ್ಶ ಶಿಕ್ಷಕರಾಗಿದ್ದರು. ಚಿತ್ರ ಮತ್ತು ಲಿಪಿ ಎರಡನ್ನೂ ಸೇರಿಸಿ ಪಠ್ಯ ರೂಪದಲ್ಲಿ ತಂದವರು. 69ಕ್ಕೂ ಹೆಚ್ಚು ಕೃತಿ ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಇವರ ಸಾಧನೆಗೆ ಸಲ್ಲಬೇಕಾದ ಗೌರವ ಸಲ್ಲದಿರುವುದು ಖೇದಕರ ಸಂಗತಿ. ಪರೋಪಕಾರ, ಉದಾರವಾದಿ ಮನಸ್ಥಿತಿಯ ದೇವಡು, ಬಡವರ ಬಗ್ಗೆ ಕರುಣೆ ಹೊಂದಿದ್ದರು ಎಂದರು.
ದೇವುಡು ಮೊಮ್ಮಗಳು ಸೂರ್ಯಪ್ರಭ ದೇವುಡು ಮಾತನಾಡಿ, ಅಜ್ಜನವರ ಸಾಹಿತ್ಯ ಅಪಾರವಾದದ್ದು. ಅವರನ್ನು ಕರ್ನಾಟಕ ವಿದ್ಯಾವರ್ಧಕ ಸಂಘ ನೆನಪಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.
ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಬಸವಪ್ರಭು ಹೊಸಕೇರಿ, ವಿಶ್ವೇಶ್ವರಿ ಹಿರೇಮಠ, ಡಾ. ಧನವಂತ ಹಾಜವಗೋಳ, ನಿಂಗಣ್ಣ ಕುಂಟಿ, ಅಶೋಕ ಕೋರಿ, ಡಾ. ಶಶಿಧರ ನರೇಂದ್ರ, ಡಾ. ಆನಂದ ಪಾಟೀಲ, ಎಂ.ಆರ್. ನಾಗರಾಜರಾವ್, ಮಹಾಂತೇಶ ನರೇಗಲ್, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net