ದೈನಂದಿನ ಜೀವನಕ್ಕೆ ಕಾನೂನು ಅರಿವು ಮುಖ್ಯ

devraj ars vv program
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಯುವಜನರು ಕಾನೂನು ವಿಚಾರಗಳ ಸೂಕ್ಷ್ಮ ಅರಿವು ಹೊಂದುವುದು ಅಗತ್ಯ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಹೇಳಿದರು.
ನಗರದ ಶ್ರೀ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾನೂನಿನ ಅರಿವು ಇಲ್ಲ ಎಂದು ಸಮಾಜದಲ್ಲಿ ಯಾರೂ ಹಕ್ಕು ಮತ್ತು ನ್ಯಾಯದಿಂದ ವಂಚಿತರಾಗಬಾರದು. ಪ್ರತಿಯೊಬ್ಬರಿಗೂ ದೈನಂದಿನ ಜೀವನಕ್ಕೆ ಅನ್ವಯವಾಗುವ ಸಾಮಾನ್ಯ ಕಾನೂನು ಕುರಿತು ಅರಿವು ಇರಬೇಕು. ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಹಾಗೂ ಆಸ್ತಿ ಮಾರಾಟ ಮತ್ತು ಖರೀದಿ, ಜನನ, ಮರಣ, ಕಂದಾಯ ಇಲಾಖೆ ಕೆಲಸಗಳ ಕುರಿತು ಕನಿಷ್ಠ ತಿಳಿವಳಿಕೆ ಬೇಕು. ಕಾನೂನು ತಿಳಿದವರು, ತಿಳಿಯವದರಿಗೆ ತಿಳಿಸಿ ಹೇಳುವ ಕೆಲಸವೂ ಮಾಡಬೇಕು ಎಂದರು.
ಶ್ರೀರಾಮ ಆಸ್ಪತ್ರೆ ನಿರ್ದೇಶಕ ಡಾ.ಎಚ್.ಜಿ.ವಿಜಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬಾರದು. ಮಾದಕ ವಸ್ತುಗಳ ಬಳಕೆಯಿಂದ ಆರೋಗ್ಯವೂ ಹಾಳಾಗುತ್ತದೆ. ವ್ಯಕ್ತಿತ್ವವೂ ನಾಶವಾಗುತ್ತದೆ. ಸಮಾಜದ ಸ್ವಾಸ್ಥ್ಯವೂ ಕೆಡುತ್ತದೆ ಎಂದರು.
ಮಾದಕ ವಸ್ತು ಮತ್ತು ಮೊಬೈಲ್ ಬಳಕೆ ಬಗ್ಗೆ ಎಚ್ಚರಿಕೆ ಅಗತ್ಯ. ಶಿಕ್ಷಣದ ಮೂಲಕ ಜ್ಞಾನವನ್ನು ಗಳಿಸಿಕೊಂಡು ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಎಂದಿಗೂ ಕಾನೂನನ್ನು ಉಲ್ಲಂಘನೆ ಮಾಡಬಾರದು ಎಂದರು.
ಲಯನ್ಸ್ ಕ್ಲಬ್ ಖಜಾಂಚಿ ಎಸ್.ರವಿಕುಮಾರ್, ಉಪಪ್ರಾಂಶುಪಾಲ ದಕ್ಷಿಣಾಮೂರ್ತಿ, ಪ್ರಾಧ್ಯಾಪಕರಾದ ಚೈತ್ರಾ, ಪ್ರಕಾಶ್, ದಿವ್ಯಾ, ಬಾಬುಸಾಬಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net