

ಗುಂಡ್ಲುಪೇಟೆ: ತಾಲೂಕಿನಾದ್ಯಂತ ಬಸವ ಜಯಂತಿಯನ್ನು ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಗ್ರಾಮಾಂತರ ಪ್ರದೇಶಗಳಲ್ಲಿ ರೈತರು ತಮ್ಮ ಎತ್ತುಗಳಿಗೆ ಹಾಗೂ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಿದರೆ, ಹೆಚ್ಚಿನ ಗ್ರಾಮಗಳಲ್ಲಿ ಬಸವೇಶ್ವರ ಬೃಹತ್ ಕಟೌಟುಗಳಿಗೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮತ್ತು ಅನ್ನದಾನ ಮಾಡಲಾಯಿತು.
ಪಟ್ಟಣದ ಸರ್ಕಾರಿ ಕಚೇರಿಗಳು ಸಂಘ, ಸಂಸ್ಥೆಗಳಲ್ಲಿ ಬಸವೇಶ್ವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಹಸೀಲ್ದಾರ್ ಮಂಜುನಾಥ್ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಸೆಸ್ಕ್ ಎಇಇ ಕೆ.ಎಂ.ಸಿದ್ದಲಿಂಗಪ್ಪ, ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ, ಶಿರಸ್ತೇದಾರ್ ಮಹೇಶ್, ಜವರೇಗೌಡ ಸೇರಿದಂತೆ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನೆರೆದಿದ್ದ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಪ್ರಸಾದ ಹಾಗೂ ಸಿಹಿ ವಿತರಣೆ ಮಾಡಲಾಯಿತು. ಸಬ್‌ಇನ್ಸ್‌ಪೆಕ್ಟರ್ ಸಾಹೇಬಗೌಡ, ಎಎಸ್‌ಐ ರೇವಣ್ಣಸ್ವಾಮಿ, ಮುಖ್ಯಪೇದೆಗಳಾದ ಗಂಗಾಧರ್, ಪ್ರಭುಸ್ವಾಮಿ, ಮಂಜು, ಮಾದಲಾಂಬಿಕೆ ಸೇರಿದಂತೆ ಸಿಬ್ಬಂದಿ ಇದ್ದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಮಂಜುನಾಥ್ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪ್ರಯೋಗಾಲಯ ಮೇಲ್ವಿಚಾರಕ ಮಹದೇವಸ್ವಾಮಿ ಹಾಗೂ ಸಿಬ್ಬಂದಿ ಇದ್ದರು.
ಪಟ್ಟಣದ ಮಡಹಳ್ಳಿ ವೃತ್ತದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಯುವಘಟಕದಿಂದ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು. ಘಟಕದ ಅಧ್ಯಕ್ಷ ಚನ್ನಮಲ್ಲೀಪುರ ಬಸವಣ್ಣ, ಪ್ರಣಯ್, ನಂದೀಶ್, ಲೋಕೇಶ್, ಗಣೇಶ್ ಹಾಗೂ ಇತರರು ಇದ್ದರು.
ತಾಲೂಕಿನ ಕಗ್ಗಳ ಗ್ರಾಮದಲ್ಲಿ ಚಿಕ್ಕತುಪ್ಪೂರು ಮಠದ ಶ್ರೀಕಂಠಸ್ವಾಮಿಗಳ ನೇತೃತ್ವದಲ್ಲಿ ಬಸವ ಜಯಂತಿ ಆಚರಿಸಿ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.