

ಮಡಿಕೇರಿ: ತಾಲೂಕಿನ ಅರ್ವತ್ತೋಕ್ಲು ಗ್ರಾಮದ ಶ್ರೀ ವಿಷ್ಣಪ್ಪ ದೇವರ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿ ಸಂಪನ್ನಗೊಂಡಿತು.
ಕಳೆದ ಮೂರು ದಿನಗಳಿಂದ ಜರುಗಿದ ಉತ್ಸವದಲ್ಲಿ ಗ್ರಾಮಸ್ಥರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಭಾಜನರಾದರು. ಕುಂಬ್ಯಾರ್ ನಮ್ಮೆ ಎಂದೇ ಕರೆಯಲ್ಪಡುವ ವಿಷ್ಣಪ್ಪ ದೇವರ ಉತ್ಸವ ಬುಧವಾರ ಸಂಜೆ ಪೊಡೆಯಂಡ ಒಕ್ಕದ ಮನೆಯಿಂದ ದುಡಿಕೊಟ್ಟ್ ಪಾಟ್‌ನೊಂದಿಗೆ ಭಂಡಾರ ತಂದು ಆಂದಿ ಕೊಟ್ಟ್, ದೀಪಾರಾಧನೆಯೊಂದಿಗೆ ಆರಂಭವಾಯಿತು.
ಗುರುವಾರ ಪಟ್ಟಣಿ, ಬ್ರಾಹ್ಮೀಸಮಯದಲ್ಲಿ ದೇವರ ಇರ್‌ಬೊಳಕ್, ತುಲಾಭಾರ ಸೇವೆ, ಪಟ್ಟ್ ಪರಕೆ ಸಲ್ಲಿಕೆ, ಊರು ಮಂದ್‌ನಿಂದ ಎತ್ತ್ ಪೋರ್ ಹೊರಟು ದೇವಾಲಯದಲ್ಲಿ ಪೋರ್ ಕಾಣಿಕೆ ಸಲ್ಲಿಕೆ, ಮಹಾಪೂಜೆ, ದೇವರ ನೃತ್ಯ ಪ್ರದಕ್ಷಿಣೆ, ನಡೆ ಭಂಡಾರ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು.
ಶುಕ್ರವಾರ ಸಾಮೂಹಿಕ ಸತ್ಯ ನಾರಾಯಣ ಪೂಜೆ, ವಿಷ್ಣಪ್ಪ ದೇವರು ಸೇರಿದಂತೆ ಸಾನಿಧ್ಯ ದೇವತೆಗಳಾದ ಗಣಪತಿ, ಲಕ್ಷ್ಮಿ, ನವಗ್ರಹ ದೇವತೆಗಳು ಹಾಗೂ ನಾಗದೇವರಿಗೆ ವಿಶೇಷ ಪೂಜೆಗಳು ನಡೆಯಿತು. ಸಂಜೆ ಕಟ್ಟುಪಾಡುಗಳನ್ನು ದೇವಾಲಯ ಸಮಿತಿಯ ಅಧ್ಯಕ್ಷ ಪೂಜಾರಿರ ಮಾದಪ್ಪ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಕಟ್ಟು ಮುರಿಯಲಾಯಿತು.
ನಂತರ ದೀಪಾರಾಧನೆ, ದುಡಿಕೊಟ್ಟ್ ಪಾಟ್ ಆದ ನಂತರ ಉತ್ಸವ ಮೂರ್ತಿಯೊಂದಿಗೆ ನಾಗನ ಕಟ್ಟೆಯಲ್ಲಿ ಪೂಜೆ, ಮುಂಜಾಂದಿರ ವಸಂತ ಕಟ್ಟೆಯಲ್ಲಿ ಪೂಜೆ, ಚಾತುರನ ವಸಂತ ಕಟ್ಟೆಯಲ್ಲಿ ಪೂಜೆ ಸಲ್ಲಿಸಿ ನದಿಗೆ ತೆರಳಿ ಗುಳಿಗರಾಜನಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಉತ್ಸವ ಮೂರ್ತಿಗೆ ಜಳಕ ಮಾಡಿಸಿ ಅಲಂಕರಿಸಿ ಪೊಡೆಯಂಡ ಒಕ್ಕದ ವಸಂತ ಕಟ್ಟೆಯಲ್ಲಿ ಪೂಜೆ ಸಲ್ಲಿಸಿ ಒಡ್ಡೋಲಗದೊಂದಿಗೆ ದೇವಾಲಯಕ್ಕೆ ಬಂದು ಉತ್ಸವ ಮೂರ್ತಿಯ ಸುತ್ತಾಟ್ ಕಾರ್ಯ ನಡೆಸಿ ತಿರಿಕೆ ಭಂಡಾರ ಒಪ್ಪಿಸಿ ವಸಂತ ಮಂಟಪದಲ್ಲಿ ವಸಂತ ಪೂಜೆ ನೆರವೇರಿಸಿ ಮಹಾಪೂಜೆ ಅನ್ನ ಸಂತರ್ಪಣೆಯೊಂದಿಗೆ ಉತ್ಸವಕ್ಕೆ ಮುಕ್ತಾಯ ಹಾಡಲಾಯಿತು.
ಊರಿನ ಪರವಾಗಿ ಊರು ತಕ್ಕ ತೆನ್ನಿರ ಮೈನಾ ಪ್ರಾರ್ಥಿಸಿದರೆ, ದೇವ ತಕ್ಕ ಕುಟುಂಬದ ಚಾತುರನ ಪದ್ಮಾನಂದ ಹಾಗೂ ಭಂಡಾರ ತಕ್ಕ ಪೊಡೆಯಂಡ ಸುಬ್ಬಯ್ಯ ನವರು ತಕ್ಕಾಮೆ ಕಾರ್ಯ ನಿರ್ವಹಿಸಿದರು. ಪ್ರಧಾನ ಅರ್ಚಕರಾದ ದೇವಿ ಪ್ರಸಾದ್ ಮತ್ತು ತಂಡದವರು ಧಾರ್ಮಿಕ ವಿಧಿವಿಧಾನಗಳನ್ನು ಶಾಸ್ತ್ರಬದ್ದವಾಗಿ ನೆರವೇರಿಸಿದರು.
ಆಡಳಿತ ಮಂಡಳಿಯ ಅಧ್ಯಕ್ಷ ಪೂಜಾರಿರ ಮಾದಪ್ಪ, ಉಪಾಧ್ಯಕ್ಷ ಪುತ್ತೇರಿರ ಸೋಮಯ್ಯ, ಸ್ಥಳ ದಾನಿಗಳಾದ ಮುಂಜಾಂದಿರ ರಮೇಶ್, ಪಧಾಧಿಕಾರಿಗಳಾದ ಮುಂಜಾಂದಿರ ವಾಸು ನಾಣಯ್ಯ, ಚೆರುಮಾಡಂಡ ಸತೀಶ್ ಸೋಮಣ್ಣ ಸೇರಿದಂತೆ ಗ್ರಾಮದ ಪ್ರಮುಖರು ಉತ್ಸವದ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.