

ಹುಬ್ಬಳ್ಳಿ: ಹತ್ತು ದಿನಗಳ ಕಾಲ ಹುಬ್ಬಳ್ಳಿಯ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ‘ಹುಬ್ಬಳ್ಳಿ ಕಾ ಮಹಾರಾಜ’, ‘ಹುಬ್ಬಳ್ಳಿ ಕಾ ರಾಜ’ ಸೇರಿದಂತೆ 190ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಆಯಾ ಸಮಿತಿಯವರು ಗುರುವಾರದಂದು ಸಿಂಗಾರ ಮಾಡಿದ ವಾಹನಗಳಲ್ಲಿ ಕೂಡಿಸಿ, ಭವ್ಯ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು.
ಮೆರವಣಿಗೆ ಉದ್ದಕ್ಕೂ ಯುವಕರು, ಮಹಿಳೆಯರು, ವೃದ್ಧರು ಪಾಲ್ಗೊಂಡು ಕುಣಿದು ಕುಪ್ಪಳಿಸಿದರು. ಗಣಪತಿ ಬಪ್ಪ ಮೋರಯಾ, ಗಣಪತಿ ಮಹಾರಾಜ್ಕೀ ಜೈ ಎಂದು ಜಯಘೊಷ ಮೊಳಗಿಸಿದರು. ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಮಹಿಳೆಯರು ಆರತಿ ಬೆಳಗಿ, ನೈವೇದ್ಯ ಅರ್ಪಿಸಿ, ಹರಕೆ ತೀರಿಸಿದರು.
ಯುವಕರು ವಿವಿಧ ಬಗೆಯ ಪಟಾಕಿ ಹಾರಿಸಿದರು. ಬ್ಯಾಂಡ್, ಜಾಂಜ್, ಭಜನೆ ಮೇಳ, ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದವು.
ಮೆರವಣಿಗೆಯು ದುರ್ಗದಬೈಲ್ನಿಂದ ಪ್ರಾರಂಭವಾಗಿ ಬ್ರಾಡ್ವೇ, ಮೇದಾರ ಓಣಿ, ದಾಜಿಬಾನಪೇಟ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಬಸವ ವನದ ಮುಖಾಂತರ ಇಂದಿರಾ ಗಾಜಿನ ಮನೆ ಆವರಣದ ಗಣೇಶ ಬಾವಿ ಹಾಗೂ ಹೊಸೂರಿನ ಗಣೇಶ ಬಾವಿಯಲ್ಲಿ ಗಣೇಶ ವಿಗ್ರಹಗಳ ವಿಸರ್ಜನೆ ಮಾಡಲಾಯಿತು.