

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಆಯುಧ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಆಯುಧ ಪೂಜೆಯ ಅಂಗವಾಗಿ ಜಿಲ್ಲೆಯ ಜನತೆ ತಮ್ಮ ವಾಹನಗಳನ್ನು ತೊಳೆದು, ಹೂವುಗಳಿಂದ ಶೃಂಗರಿಸಿ, ಕುಂಕುಮ, ಅರಶಿನವನ್ನು ಹಚ್ಚಿ, ಅದಕ್ಕೆ ನಿಂಬೆ ಹಣ್ಣು, ಕುಂಬಳ ಕಾಯಿ ಒಡೆದು ಪೂಜೆ ಸಲ್ಲಿಸಿದರು. ಮಾವಿನ ಸೊಪ್ಪು, ಬಾಳೆಕಂದು, ಕಬ್ಬು ಹಾಗೂ ಚಂಡು ಹೂವುಗಳಿಂದ ಆಲಂಕರಿಸಿದ್ದ ವಾಹನಗಳು ಮದುವಣಗಿತ್ತಿಯಂತೆ ರಸ್ತೆಯೆಲ್ಲೆಡೆ ಓಡಾಡುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು. ಜಿಲ್ಲೆಯ ವಿವಿಧೆಡೆ ಸಂಘ ಸಂಸ್ಥೆಗಳಿಂದ ಅಲಂಕಾರ ಮಾಡಿದ ವಾಹನಗಳಿಗೆ ಬಹುಮಾನ ವಿತರಿಸಲಾಯಿತು.
ನೂತನ ವಾಹನ ಖರೀದಿಗಾರರು ಹೆಚ್ಚಾಗಿ ಆಯುಧ ಪೂಜೆಯಂದೇ ತಮ್ಮ ಕಾರು, ಬೈಕ್‌ಗಳಿಗೆ ಪೂಜೆ ಸಲ್ಲಿಸಿ ಮೊದಲ ಪ್ರಯಾಣ ಆರಂಭಿಸಿದರು. ಹೀಗೆ ಮಾಡುವುದರಿಂದ ವಾಹನಗಳಿಗೆ ದೀರ್ಘ ಬಾಳ್ವಿಕೆ ಪ್ರಾಪ್ತಿಯಾಗುವುದರೊಂದಿಗೆ ಅಪಘಾತವನ್ನು ತಪ್ಪಿಸಬಹುದಾಗಿದೆ ಎಂಬುದು ನಂಬಿಕೆಯಾಗಿದೆ.
ಹಿಂದೂ ಸಂಸ್ಕೃತಿಯ ಪ್ರಕಾರ ಯಂತ್ರಗಳಿಗೂ ದೈವಿಕ ಶಕ್ತಿ ಇದ್ದೇ ಇರುತ್ತದೆ. ಇದರಿಂದಾಗಿ ಆಯುಧ ಪೂಜೆಯಂದು ವಾಹನಗಳಿಗೆ ಪೂಜೆ ಸಲ್ಲಿಸಿದರೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ನಂಬಲಾಗಿದೆ. ಅದರಂತೆ ಜಿಲ್ಲೆಯಾದ್ಯಂತ ಮನೆ, ಕಚೇರಿ, ಅಂಗಡಿಗಳಲ್ಲಿ ಪೂಜೆ ಸಲ್ಲಿಸಲಾಯಿತು.