

ಹಳಿಯಾಳ: ಶ್ರೀಶೈಲಂ ಆಂಧ್ರಪ್ರದೇಶ ಪೀಠದ 1008 ಜಗದ್ಗುರು. ಡಾ. ಚನ್ನ ಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ಅಡ್ಡ ಪಲ್ಲಕ್ಕಿ ಉತ್ಸವ ಪಟ್ಟಣದಲ್ಲಿ ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.
ಪಟ್ಟಣದ ಜವಳಿಗಲ್ಲಿಯ ಶ್ರೀ ಗುರು ವಿರಕ್ತಮಠದಿಂದ ಪ್ರಾರಂಭವಾದ ಮೆರವಣಿಗೆ ಮಾರುಕಟ್ಟೆ ರಸ್ತೆ ಮೂಲಕ ಶಿವಾಜಿ ವೃತ್ತ, ವನಶ್ರೀ ವೃತ್ತದ ಮೂಲಕ ಸಾಗಿ ಶ್ರೀ ಗಣೇಶ ಕಲ್ಯಾಣ ಮಂಟಪ ತಲುಪಿ ಸಂಪನ್ನಗೊಂಡಿತು. ಸಂತರಿಂದ ಭಜನೆ ಹಾಗೂ ಡೋಲು ವಾದ್ಯ ಮೇಳದೊಂದಿಗೆ ಸಾಗಿದ ಮೆರವಣಿಗೆಗೆ ಮುತ್ತಲಮರಿ ಡೋಲು ತಾಷಾ ಕುಣಿತವು ಮೆರುಗು ಹೆಚ್ಚಿಸಿತು. ಉತ್ಸವದ ಅಂಗವಾಗಿ ಬೀದಿಗಳನ್ನು ಸ್ವಚ್ಛಗೊಳಿಸಿ, ರಂಗೋಲಿ ಬಿಡಿಸಿ ಸಿಂಗರಿಸಲಾಗಿತ್ತು. ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ಮೆರವಣಿಗೆಯ ಮಾರ್ಗದುದ್ದಕ್ಕೂ ಭಕ್ತರು ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.
ಪುರಸಭೆ ಸದಸ್ಯ ಉದಯ ಹೂಲಿ, ರವಿ ತೋರಣಗಟ್ಟಿ, ಮಂಜುನಾಥ ಪಂಡಿತ, ಬಸವರಾಜ ಬೆಂಡಿಗೇರಿಮಠ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸದಸ್ಯರು, ಕಳಸಾಯಿ ಶ್ರೀಶೈಲ ಪೀಠದ ಅಭಿವೃದ್ಧಿ ಸಮಿತಿಯವರು, ಉಕ ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜದವರು ಇದ್ದರು.