ದೈವ ಭಕ್ತಿಯಿಂದ ದೇಶ ಭಕ್ತಿ ಜಾಗೃತ

6 vikram 9A
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಜಯ ದಶಮಿ ನಿಮಿತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಭಾನುವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ಪಥ ಸಂಚಲನ ಕಣ್ಮನ ಸೆಳೆಯಿತು.
ಗಣ ವೇಷಧಾರಿಗಳು ಶಿಸ್ತಿನ ಸಿಪಾಯಿಗಳಂತೆ ಘೋಷ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರೆ, ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ಸಂಚಲನ ವೀಕ್ಷಿಸಿದರು. ನಗರದ ಪ್ರಮುಖ ಬೀದಿಗಳನ್ನು ರಂಗೋಲಿ, ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಪಥ ಸಂಚಲನದಲ್ಲಿದ್ದ ಭಗವಾ ಧ್ವಜ ಹಾಗೂ ಸಂಘದ ಸಂಸ್ಥಾಪಕರಾದ ಡಾಕ್ಟರಜೀ, ಗುರೂಜಿ ಭಾವಚಿತ್ರಕ್ಕೆ ಜನರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಚಿಕ್ಕಮಕ್ಕಳು ಮಹಾಪುರುಷರ ವೇಷಭೂಷಣ ತೊಟ್ಟು ಗಮನ ಸೆಳೆದರು.
ಒಂದು ತಂಡ ಭಾರತ ಹೈಸ್ಕೂಲ್​ ಮೈದಾನ ಮೂಲಕ ರೀಗಲ್​ ವೃತ್ತ, ಸೂಪರ್​ ಮಾರ್ಕೆಟ್​, ಗಾಂಧಿಚೌಕ, ಹೆಬ್ಬಳ್ಳಿ ಅಗಸಿ, ಮಂಗಳವಾರಪೇಟೆ, ಕಾಮನಕಟ್ಟಿ ಮಾರ್ಗವಾಗಿ ಕೆಸಿಸಿ ಬ್ಯಾಂಕ್​ ತಲುಪಿದರೆ, ಇನ್ನೊಂಡು ತಂಡ ಭಾರತ ಹೈಸ್ಕೂಲ್​ನಿಂದ ರೀಗಲ್​ ವೃತ್ತ, ಮಹಾರಾಣಾ ಪ್ರತಾಪ ವೃತ್ತ, ಆರದ್​ ಪಾರ್ಕ್​, ಹಳೇ ಬಸ್​ ನಿಲ್ದಾಣ, ಭೂಸಪ್ಪ ಚೌಕ್​ ಮಾರ್ಗವಾಗಿ ಕೆಸಿಸಿ ಬ್ಯಾಂಕ್​ ತಲಪಿತು. ಎರಡೂ ಸಂಚಲನ ಕೆಸಿಸಿ ಬ್ಯಾಂಕ್​ ವೃತ್ತದಲ್ಲಿ ಸಂಗಮವಾಗಿದ್ದು ಅತ್ಯಂತ ಆಕರ್ಷಣೀಯವಾಗಿತ್ತು.
ನಂತರ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಆರ್​ಎಸ್​ಎಸ್​ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಮಾತನಾಡಿ, ಮನುಷ್ಯನಿಗೆ ದೈವತ್ವಕ್ಕಿಂತ ದೇಶವೇ ಮುಖ್ಯ. ದೈವ ಭಕ್ತಿಯಿಂದ ನಮ್ಮಲ್ಲಿ ದೇಶ ಭಕ್ತಿಯೂ ಜಾಗೃತವಾಗಲಿದೆ. ದೈವ ಭಕ್ತಿಯಲ್ಲಿ ದೇಶಭಕ್ತಿ ಬಗ್ಗೆ ಮೈ ಮರೆಯಬಾರದು. ಆದರೆ, ನಮ್ಮ ಹಿಂದೂ ಸಮಾಜ, ದೇಶಭಕ್ತಿ ವಿಚಾರದಲ್ಲೂ ಆತ್ಮವಂಚನೆ ಮಾಡಿಕೊಳ್ಳುತ್ತಿದೆ ಎಂದರು.
ದೇಶಕ್ಕೆ ಒಳ್ಳೆಯದನ್ನು ಮಾಡಲು ಹಿಂದೂ ಸಮಾಜಕ್ಕೆ ಶಕ್ತಿ ಜತೆಗೆ ಗುಣವೂ ಮುಖ್ಯ. ಇಂತಹ ಶಕ್ತಿಯನ್ನು ರಾಜಕೀಯ ನಾಯಕರು ಸ್ವಾರ್ಥಕ್ಕೆ ಬಳಸುತ್ತಿರುವುದು ಬೇಸರದ ಸಂಗತಿ. ಸಂಘದ 100 ವರ್ಷದ ಸಾಧನೆ ಒಂದು ತಪಸ್ಸಿದ್ದಂತೆ ಎಂದ ಅವರು, ಸಂಘದ ಬಗ್ಗೆ ಗೊತ್ತಿಲ್ಲದ ಕೆಲವರು ಅಪಪ್ರಚಾರ, ಟೀಕೆ, ಟಿಪ್ಪಣಿ ಮಾಡುವುದು ಸರಿಯಲ್ಲ. ಸಂಘದ ಒಳಗೆ ಬಂದು ತಿಳಿಯುವ ಪ್ರಯತ್ನ ಮಾಡಬೇಕು ಎಂದರು.
ಹಿಂದುತ್ವ ಎಂಬುದು ರಾಷ್ಟ್ರೀಯತೆಯ ಪರ್ಯಾಯ. ಒಂದು ಮತ, ಪಂಥವಲ್ಲ. ಅದೊಂದು ಜೀವನ ಕ್ರಮ ಎಂಬುದನ್ನು ಸರ್ವೋಚ್ಚ ನ್ಯಾಯಾಲಯವೇ ತಿಳಿಸಿದೆ. ಆದರೂ ಹಿಂದುತ್ವದ ಕುರಿತು ವಿದ್ವತ್​ ವಲಯಗಳಲ್ಲಿ ಗೊಂದಲಗಳು ಬರುತ್ತಿವೆ. ಕೆಲವರು ಉದ್ದೇಶ ಪೂರ್ವಕ ವಿವಾದ ಸೃಷ್ಟಿಸುತ್ತಿದ್ದಾರೆ. ದೇಶ-ವಿದೇಶಗಳಿಗೆ ತೆರಳಿ ರಾಷ್ಟ್ರೀಯತೆ ಕುರಿತು ಇಲ್ಲಸಲ್ಲದ ಹೇಳಿಕೆ ನೀಡಿದರೆ, ನಮ್ಮ ದೇಶಕ್ಕೆ ಅವಮಾನ ಮಾಡುವವರನ್ನು ಭಾರತ ಮಾತೆಯ ಮಕ್ಕಳೆಂದು ಒಪ್ಪಿಕೊಳ್ಳುವುದು ಅಸಾಧ್ಯ ಎಂದು ರವೀಂದ್ರ ಅಭಿಪ್ರಾಯಪಟ್ಟರು.
ಅತಿಥಿಯಾಗಿ ಪಾಲ್ಗೊಂಡಿದ್ದ ಮೃತ್ಯುಂಜಯ ಬಡಿಗೇರ ಮಾತನಾಡಿದರು. ಡಾ.ವೇದವ್ಯಾಸ ದೇಶಪಾಂಡೆ ಇದ್ದರು. ಇದಕ್ಕೂ ಪೂರ್ವದಲ್ಲಿ ಸ್ವಯಂ ಸೇವಕರು ದಂಡ, ಸಮತಾ, ಆಟ, ದಂಡ ವ್ಯಾಯಾಮ, ವ್ಯಾಯಾಮ ಪ್ರದಶಿರ್ಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net