

ಗಂಗಾವತಿ: ವರ್ತಮಾನದಲ್ಲಿ ಮನುಷ್ಯ ಹೊರಗಡೆ ಮನುಷ್ಯನ ಆಕಾರದಲ್ಲಿದ್ದರೇ, ಒಳಭಾಗದಲ್ಲಿ ರಾಕ್ಷಸನಂತಿದ್ದಾನೆ. ಮಾನವನ ದುರ್ಗುಣಗಳನ್ನು ನಿಯಂತ್ರಿಸಿ, ಅಂತರಂಗ ಶುದ್ಧಿ ಜತೆಗೆ ವ್ಯಕ್ತಿತ್ವ ವಿಕಸನ ಮಾಡುವುದೇ ದಾಸ ಸಾಹಿತ್ಯದ ಆಶಯವಾಗಿದೆ ಎಂದು ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.
ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಮಗ್ರ ದಾಸ ಸಾಹಿತ್ಯ ಅಧ್ಯಯನ ಪೀಠ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವನ ಮನ ಪರಿವರ್ತನೆಯೇ ಸಾಹಿತ್ಯದ ಮೂಲ ಆಶಯವಾಗಿದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ದಾಸಸಾಹಿತ್ಯಕ್ಕೆ ಮಹತ್ವದ ಸ್ಥಾನವಿದ್ದು, ವ್ಯಕ್ತಿ ಬದುಕುವ ರೀತಿ, ನೀತಿ, ನಡವಳಿಕೆ ಬಗ್ಗೆ ಸಂದೇಶ ನೀಡಿದೆ. ದಾಸ ಸಾಹಿತ್ಯ ಭಕ್ತಿ ಪೂರ್ವಕವಾಗಿ ಜೀವನ ನಡೆಸಲು ತಿಳಿಸಿ, ಕೀರ್ತನೆಗಳನ್ನು ಕೇಳಿದರೆ ಕೋಪ, ಕ್ರೋಧ, ಮದ, ಮತ್ಸರಗಳು ಇಲ್ಲದಂತಾಗುತ್ತವೆ ಎಂದರು.
ಸಿಂಧನೂರು ಕನ್ನಡ ಉಪನ್ಯಾಸಕಿ ಡಾ.ಮಧುಮತಿ ದೇಶಪಾಂಡೆ ಮಹಿಳಾ ಕೀರ್ತನಕಾರರ ಬಗ್ಗೆ ಉಪನ್ಯಾಸ ನೀಡಿ, ಗಲ ಗಲಿ ಅವ್ವ ಕನ್ನಡದ ಮೊದಲ ಹರಿದಾಸ ಮಹಿಳೆಯಾಗಿದ್ದಾಳೆ. ಕನಕಗಿರಿ ತಾಲೂಕಿನ ನವಲಿ ಗ್ರಾಮದವಳು. ಮಹಿಳೆಯರ ನೋವು ನುಂಗಿ ಹಾಡುಗಳ ಮೂಲಕ ಆ ನೋವನ್ನು ಅಭಿವ್ಯಕ್ತಿಸಿದ್ದಾಳೆ. ಹರಪನಹಳ್ಳಿ ಭೀಮವ್ವ ಗಾಢವಾಗಿ ತನ್ನ ಕೃತಿಗಳಲ್ಲಿ ತೆರೆದಿಟ್ಟಿದ್ದಾಳೆ ಎಂದರು. ಕನ್ನಡ ಉಪನ್ಯಾಸಕ ಗುಂಡೂರು ಪವನ್ ಕುಮಾರ ಮಾತನಾಡಿದರು.