ಭಗವಂತನ ಸ್ಮರಣೆಗೆ ಭಕ್ತಿ ಅವಶ್ಯ

Mannelemavu
Published on

ಸಿದ್ದಾಪುರ: ಆಚಾರ್ಯ ಶಂಕರರ ರಚನೆಯ ಎಲ್ಲ ಸ್ತೋತ್ರಗಳು ಬಹಳ ವಿಶೇಷವಾಗಿವೆ. ಅದರಲ್ಲೂ ಸೌಂದರ್ಯಲಹರಿಯಲ್ಲಂತೂ ಒಂದೊಂದು ಶ್ಲೋಕಕ್ಕೂ ಒಂದೊಂದು ಉಪಾಸನಾ ಪದ್ಧತಿಗಳಿವೆ ಎಂದು ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ನುಡಿದರು.

ತಾಲೂಕಿನ ಶ್ರೀಮನ್ನೆಲೆಮಾವಿನ ಮಠದಲ್ಲಿ ಆಯೋಜಿಸಿದ್ದ ಶ್ರೀಮನ್ಮಹಾರಥ ಸಮರ್ಪಣಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶ್ರೀ ಲಕ್ಷ್ಮೀನೃಸಿಂಹ ಮೂಲಮಂತ್ರ ಹವನ ಕಲ್ಯಾಣ ಸ್ತೋತ್ರ ಸಮರ್ಪಣೆ, ಹವನದ ಪೂರ್ಣಾಹುತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಗುರುವಾರ ಆಶೀರ್ವಚನ ನೀಡಿದರು. ಶ್ಲೋಕಗಳನ್ನು ಮಂತ್ರ ಸಮಾನವಾಗಿ ಪರಿಗಣನೆ ಮಾಡಿ, ಅದಕ್ಕೊಂದು ಉಪಾಸನೆ, ಯಂತ್ರ, ಪೂಜಾಕ್ರಮ ಹಾಗೂ ಅದರ ಫಲ ಇತ್ಯಾದಿಗಳನ್ನು ಶಾಸ್ತ್ರದಲ್ಲಿ ಹೇಳಿದ್ದಾರೆ. ಇಷ್ಟು ಮಹಿಮಾನ್ವಿತವಾದ ಸ್ತೋತ್ರಗಳನ್ನು ಶಂಕರ ಭಾಗವತ್ಪಾದರು ರಚನೆ ಮಾಡಿದ್ದಾರೆ. ಪರಮೇಶ್ವರನೇ ಶಂಕರ ಭಗವತ್ಪಾದಾಚಾರ್ಯರ ರೂಪದಲ್ಲಿ ಅವತಾರ ಮಾಡಿ, ಭಕ್ತರು ಭಗವಂತನಲ್ಲಿ ಪ್ರಾರ್ಥನೆ ಮಾಡಿ, ಅನುಗ್ರಹಕ್ಕೆ ಪಾತ್ರರಾಗುವುದಕ್ಕೆ ಪಠಿಸಬೇಕಾದ ಸ್ತೋತ್ರಗಳನ್ನು ಅವರೇ ರಚನೆ ಮಾಡಿ ಜಗತ್ತಿಗೆ ಕೊಟ್ಟಿದ್ದಾರೆ. ಇದು ಒಂದು ರೀತಿಯಲ್ಲಿ ಭಗವಂತನೇ ಭಕ್ತರು ತನ್ನ ಜತೆಯಲ್ಲಿ ಹೇಗೆ ಮಾತನಾಡಬೇಕು ಎಂದು ಹೇಳಿಕೊಟ್ಟಂತಾಗಿದೆ ಎಂದರು.

ಅದ್ವೈತ ಸಂಪ್ರದಾಯ, ಶಂಕರ ಪರಂಪರೆಯ ಮಠಗಳಲ್ಲಿ ಸಾಮಾನ್ಯವಾಗಿ ಶಿವ, ವಿಷ್ಣು ಮತ್ತು ಅಮ್ಮನವರು - ಭಗವಂತನ ಈ ಮೂರೂ ಸ್ವರೂಪಗಳ ಆರಾಧನೆ ನಡೆಯುತ್ತದೆ. ಭಗವಂತನ ಸ್ಮರಣೆ ಮಾಡುವಾಗ ಮನಸ್ಸಿನ ಸ್ವಚ್ಛತೆ ಹಾಗೂ ಭಕ್ತಿ ಎಂಬುದು ತುಂಬಾ ಅವಶ್ಯಕ, ಹಾಗೆ ಮಾಡಿದಾಗ ಭಗವಂತ ಎಲ್ಲರಿಗೂ ಅನುಗ್ರಹ ಮಾಡಿಯೇ ಮಾಡುತ್ತಾನೆ ಎಂದರು.

ಶ್ರೀಮನ್ನೆಲೆಮಾವಿನ ಮಠದ ಶ್ರೀ ಮಾಧವಾನಂದ ಭಾರತಿ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು.

ಮಾತೆಯರಿಂದ ಕಲ್ಯಾಣವೃಷ್ಟಿ ಸ್ತೋತ್ರ, ಶಿವಪಂಚಾಕ್ಷರಿ ಸ್ತೋತ್ರ ಹಾಗೂ ಶ್ರೀ ಲಕ್ಷ್ಮೀನೃಸಿಂಹ ಸ್ತೋತ್ರ ಸಮರ್ಪಣೆ ನಡೆಯಿತು.

ಶ್ರೀಮಠದ ಆಡಳಿತ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು, ಅರ್ಚಕರು, ಶಿಷ್ಯವೃಂದದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net