ಭಕ್ತಿ, ಶ್ರದ್ಧೆ, ವಿದ್ಯೆ ಸದಾ ನಮ್ಮನ್ನು ಕಾಪಾಡುತ್ತವೆ, ನಿರ್ಮಲಾನಂದ ಮಹಾಸ್ವಾಮೀಜಿ ಆಶೀರ್ವಚನ

28hnr1 b
Published on

ಹೊನ್ನಾವರ: ಸತ್ತಂತಿಹರನು ಬಡಿದೆಚ್ಚರಿಸಲು ಮತ್ತು ಕಚ್ಚಾಡುವವರನ್ನು ಕೂಡಿಸಿ ಒಲಿಸಲು ಮಠ ಮತ್ತು ಸಮುದಾಯ ಸಂಘಟನೆ ಬೇಕು. ಸ್ವಾಭಿಮಾನದ ಬದುಕು ನಡೆಸಲು ಜ್ಞಾನ ಮತ್ತು ಕೌಶಲ ಬೇಕು ಎಂದು ಆದಿಚುಂಚನಗಿರಿ ಮಠಾಧೀಶರಾದ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮೀಜಿ ನುಡಿದರು.

ತಾಲೂಕಿನ ಕೆಳಗಿನೂರಿನಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನೂತನ ಶಾಖಾಮಠವನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.ಸಮಾಜ ಕಟ್ಟುವ ಕೆಲಸ ನಡೆದಿದೆ. ಜನಪ್ರತಿನಿಧಿಗಳ ಸಹಾಯ ಮತ್ತು ಸಮಾಜದ ಎಲ್ಲರ ಸಹಕಾರದಿಂದ ಶಾಖಾಮಠ ಸ್ಥಾಪನೆಯಾಗಿದೆ. ಮಾನವ ಸಂಪನ್ಮೂಲ ನಷ್ಟ ಆಗಬಾರದು. ಎಲ್ಲರೂ ಎಚ್ಚೆತ್ತು ಕೆಲಸ ಮಾಡಲು ಹೊರಟಿದ್ದೀರಿ. ಕೀಳರಿಮೆ ಬೇಡ ಭಕ್ತಿ, ಶ್ರದ್ಧೆ, ವಿದ್ಯೆ ಸದಾ ನಮ್ಮನ್ನು ಕಾಪಾಡುತ್ತದೆ. ಮಠದಿಂದ ಸಮಾಜಕ್ಕೆ ಅನುಕೂಲವಾಗುವ ಕೆಲಸಗಳು ನಡೆಯುವುದು ಎಂದರು.

ಶಾಖಾಮಠ ಸ್ಥಾಪನೆಗೆ ಸಹಾಯ ನೀಡಿದ ಸಚಿವ ಮಂಕಾಳ ವೈದ್ಯ, ಪತ್ನಿ ಪುಷ್ಪಲತಾ, ಪುತ್ರಿ ಬೀನಾ ವೈದ್ಯ ಅವರನ್ನು ಸನ್ಮಾನಿಸಲಾಯಿತು,  ಸನ್ಮಾನ ಸ್ವೀಕರಿಸಿದ ಮಂಕಾಳ ವೈದ್ಯ ಮಾತನಾಡಿ, ಸ್ವಾಮೀಜಿ ಅವರು ಶಾಖಾಮಠ ನಿರ್ವಿುಸಲು ಹೇಳಲಿಲ್ಲ, ಅದನ್ನು ನನ್ನ ಆಸೆಗಾಗಿ ಮಾಡಿದ್ದೇನೆ. ಒಂದೇ ಮರದಲ್ಲಿ ಎಲ್ಲ ಬಗೆಯ ಹಣ್ಣುಗಳು ಸಿಗುವ ಮರ ಇದ್ದರೆ ಅದು ಆದಿಚುಂಚನಗಿರಿ ಮಠ ಮಾತ್ರ. ನಾನು ಇಲ್ಲಿ ಈ ಸ್ಥಾನದಲ್ಲಿ ನಿಂತು ಮಾತನಾಡಲು ಆದಿಚುಂಚನಗಿರಿ ಮಠವೇ ಕಾರಣ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಒಕ್ಕಲಿಗರು ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಸಾಧಿಸುತ್ತಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ನಾನೂ ಕೂಡ ಸಹಾಯ ಸಹಕಾರ ನೀಡಿದ್ದೇನೆ. ಕುಮಟಾದಲ್ಲಿ ಹಾಲಕ್ಕಿ ಮತ್ತು ಪಟಗಾರ ಸಮುದಾಯ ಭವನಗಳಿಗೆ ಅನುದಾನ ನೀಡಿದ್ದೇನೆ ಎಂದರು.

ರೈತ ರತ್ನ ಪ್ರಶಸ್ತಿ ಪುರಸ್ಕೃತ ಸಹಕಾರಿ ಧುರೀಣ ಗಣಪಯ್ಯ ಗೌಡ, ಸಮುದಾಯ ಭವನ ನಿರ್ವಾಹಕ ಕಿರಣ ಮಂಜು ಗೌಡ, ಮಾದೇವಿ ವಿಷ್ಣು ಗೌಡ ಅವರನ್ನು ಸನ್ಮಾನಿಸಲಾಯಿತು. ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ವಿವಿಧ ಶಾಖಾಮಠದ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು.

ತಾಲೂಕು ಒಕ್ಕಲಿಗ ಸಂಘದ ತಿಮ್ಮಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ಅಧ್ಯಕ್ಷೆ ಭಾರತಿ ಶಂಕರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಧಮೇಶ್ ಸಿರಿಬೈಲ, ಶಾಖಾಮಠ ಲೋಕಾರ್ಪಣೆ ಸಮಿತಿ ಅಧ್ಯಕ್ಷ ಕೃಷ್ಣ ಜಟ್ಟಿ ಗೌಡ, ಭೈರವಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಶಾಂತಿ ಗೌಡ, ಗ್ರಾ.ಪಂ. ಅಧ್ಯಕ್ಷೆ ಚಿತ್ರಾಕ್ಷಿ ಗೌಡ, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ವಾಸು ಗೌಡ, ಡಿಎಫ್​ಒ ಯೋಗೇಶ ಸಿ.ಕೆ., ತಹಸೀಲ್ದಾರ್ ಪ್ರವೀಣ ಕರಾಂಡೆ, ವಕೀಲ ಕೆ.ಟಿ. ಗೌಡ, ವಿವಿಧ ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಲಕ್ಷ್ಮೀಕಾಂತ ಗೌಡ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ವಂದಿಸಿದರು.

ಈ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಆಗಮಿಸಬೇಕಿತ್ತು. ಆದರೆ, ಈಗ ಅವರು ಬಹಳ ಗೊಂದಲದಲ್ಲಿದ್ದಾರೆ. ಹಾಗಾಗಿ ಬರಲು ಅವರಿಗೆ ಸಾಧ್ಯವಾಗಿಲ್ಲ. | ಮಂಕಾಳ ವೈದ್ಯ, ಸಚಿವ ಪೂಜ್ಯರ ಮಾರ್ಗದರ್ಶನದಲ್ಲಿ ಉತ್ತಮ ಕೆಲಸ ಮಾಡಿದ್ದೀರಿ. ಶಕ್ತಿ, ಶ್ರದ್ಧೆ, ಶ್ರಮ ಹಾಗೂ ನಂಬಿಕೆ ತೋರಿದ್ದೀರಿ. ಈ ವೇದಿಕೆಯಿಂದ ಜೋಡಿಸುವ ಕೆಲಸ ಆಗಬೇಕು. ದ್ವೇಷ, ವೈಷಮ್ಯಗಳನ್ನು ಬಿಟ್ಟು ಸೌಹಾರ್ದತೆ ಮೂಡಿಸುವ ಕೆಲಸ ನಡೆಯಬೇಕು. ನಗರೀಕರಣದಿಂದಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿರುವುದು ಆತಂಕಕಾರಿ ಸಂಗತಿ. ಜಾಗೃತಿ ಮತ್ತು ತಿಳುವಳಿಕೆಯನ್ನು ಮೂಡಿಸಿ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು.  | ಡಾ. ಅಶ್ವತ್ಥನಾರಾಯಣ, ಮಾಜಿ ಉಪಮುಖ್ಯಮಂತ್ರಿ, ಶಾಸಕ ಶಿಕ್ಷಣವಿದ್ದರೆ ಮಾತ್ರ ಪ್ರಗತಿ ಹೊಂದಲು ಸಾಧ್ಯ ಎನ್ನುವ ಉದ್ದೇಶವನ್ನಿಟ್ಟುಕೊಂಡು ಆದಿಚುಂಚನಗಿರಿ ಮಠವು ಶಿಕ್ಷಣ ಸಂಸ್ಥೆಗಳ ಮೂಲಕ ಜನರಿಗೆ ಅನುಕೂಲ ಕಲ್ಪಿಸುತ್ತಿದೆ. ತಾರತಮ್ಯ ಧೋರಣೆ ಬಿಟ್ಟು ಎಲ್ಲರೂ ಸೌಹಾರ್ದಯುತವಾಗಿ ಮುನ್ನಡೆಯಬೇಕು. | ಭೀಮಣ್ಣ ನಾಯ್ಕ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net