ಪೇಜಾವರ ಶ್ರೀಗಳಿಗೆ ನಾಣ್ಯದ ತುಲಾಭಾರ

tulaabhar
Published on

ಹುಬ್ಬಳ್ಳಿ: ಅಖಿಲ ಭಾರತ ಮಾಧ್ವ ಮಹಾಮಂಡಲದ ವತಿಯಿಂದ ನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಗುರುವಾರ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳ ಅವರಿಗೆ ನಾಣ್ಯದ ತುಲಾಭಾರ ನಡೆಸಲಾಯಿತು.

ಶ್ರೀಗಳ ಷಷ್ಟ್ಯಬ್ದ ಅಂಗವಾಗಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತುಲಾಭಾರ ಪೂರ್ಣಗೊಳ್ಳುತ್ತಿದ್ದಂತೆ ಶಿಷ್ಯರು, ಹರಿ ಸವೋತ್ತಮ...ವಾಸುದೇವ...ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದಂಗಳವರಿಗೆ....ಎಂದು ಜಯಘೊಷ ಹಾಕಿದರು.

ಈ ವೇಳೆ ಶಿಷ್ಯರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಹೂವಿನ ಮನಸ್ಸಿನ ಹುಬ್ಬಳ್ಳಿಯ ಜನ ಇಂದು ನನ್ನ ತುಲಾಭಾರ ನೆರವೇರಿಸಿದ್ದೀರಿ. ನಾನು ಸಮಾಜ ಸೇವೆ ಮಾಡಿದ್ದೇನೆಂದು ನನ್ನನ್ನು ಈ ರೀತಿ ಗೌರವಿಸಿದ್ದೀರಿ. ಅದೆಲ್ಲ ನಾನು ಮಾಡಿದ್ದಲ್ಲ. ಭಗವಂತನ ಪ್ರೇರಣೆಯಿಂದ ಎಲ್ಲವೂ ನಡೆಯುತ್ತಿದೆ. ಭಕ್ತರು ಮಾಡಿದ ತುಲಾಭಾರ ಸೇವೆಯನ್ನು ಶ್ರೀಕೃಷ್ಣನಿಗೆ ಸಮರ್ಪಣೆ ಮಾಡುತ್ತಿದ್ದೇನೆ ಎಂದರು.

ಎಲ್ಲವೂ ನಾನೇ ಮಾಡಿದ್ದು ಎಂದು ಹೇಳುವುದು ತಪ್ಪಾಗುತ್ತದೆ. ಎಲ್ಲವೂ ಭಗವಂತನಿಂದ ಸಾಧ್ಯವಾಗಿದ್ದು ಎಂದು ಹೇಳಿದರು.

ಮಹಾಮಂಡಲದ ಅಧ್ಯಕ್ಷ ಶ್ರೀಪಾದ ಸಿಂಗನಮಲ್ಲಿ, ಕಾರ್ಯದರ್ಶಿ ಅನಂತರಾಜ ಭಟ್, ಹುಬ್ಬಳ್ಳಿ ವಿಭಾಗದ ಅಧ್ಯಕ್ಷ ಕೃಷ್ಣರಾಜ ಕೆಮ್ತೂರ, ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ, ಇತರರು ಇದ್ದರು.

ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಚಕ್ರಾಬ್ಜ ಮಂಡಲ ಮಹಾಪೂಜೆ ನೆರವೇರಿತು. ನರಸಿಂಹಾಚಾರ್ಯ ಕೊರ್ಲಹಳ್ಳಿ, ಡಾ.ಎಚ್. ಸತ್ಯನಾರಾಯಣಾಚಾರ್ಯ, ವಾದಿರಾಜಾಚಾರ್ಯ ತಡಕೋಡ, ಪ್ರದ್ಯುಮ್ನಾಚಾರ್ಯ ಜೋಶಿ, ಹರಿ ಆಚಾರ್ಯ ವಾಳ್ವೇಕರ ಅವರಿಂದ ಉಪನ್ಯಾಸ ನಡೆಯಿತು. ಭಕ್ತರಿಗೆ ಫಲಮಂತ್ರಾಕ್ಷತೆ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net