

ಹನೂರು: ಪಟ್ಟಣದ ಶ್ರೀ ಮಹಿಷಾಸುರ ಮರ್ದಿನಿ (ಮೈಸೂರು ಮಾರಮ್ಮ)ಜಾತ್ರೋತ್ಸವದ ಅಂಗವಾಗಿ ಬುಧವಾರ ಹರಕೆ ಹೊತ್ತ ಭಕ್ತರಿಂದ ಬಾಯಿಬೀಗ ಸೇವೆ ಸಲ್ಲಿಸಿದರು.
ಈ ಜಾತ್ರೋತ್ಸವದಲ್ಲಿ ಬಾಯಿಬೀಗ ಸೇವೆಯು ಹೆಚ್ಚು ಪ್ರಸಿದ್ಧಿ ಪಡೆದಿದ್ದು, ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಹರಕೆಹೊತ್ತ ಭಕ್ತರು ಬುಧವಾರ ಉಪವಾಸ ಕೈಗೊಂಡಿದ್ದು, ಬೆಳಗ್ಗೆ ಮಹಿಷಾಸುರ ಮರ್ದಿನಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಪಟ್ಟಣದ ತಟ್ಟೆಹಳ್ಳ ಸಮೀಪವಿರುವ ಗಾಣಿಗರ ಬೀದಿಯ ಅರಳಿಕಟ್ಟೆಯ ಬಳಿ ಅರ್ಚಕರು ಕಬ್ಬಿಣದ ಸಲಾಕೆಗಳಿಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆ ಸಲ್ಲಿಸಿದರು. ಹರಕೆ ಹೊತ್ತಿದ್ದ ಭಕ್ತರಿಗೆ ಅರಿಶಿಣ ಮಿಶ್ರಿತ ನೀರನ್ನು ಮೈಮೇಲೆ ಸುರಿದು ಸುಮಾರು 20 ಅಡಿ ಉದ್ದದ ಸರಳಿನಿಂದ ಬಾಯಿಬೀಗವನ್ನು ಹಾಕಲಾಯಿತು. ಬಾಯಿಬೀಗ ಹಾಕುವ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ವಿಸ್ಮಯಗೊಂಡರು.
ಬಳಿಕ ಬಾಯಿಬೀಗವನ್ನು ಹಾಕಿಸಿಕೊಂಡ ಭಕ್ತರು ಅರಳಿಕಟ್ಟೆಯಿಂದ ಮೆರವಣಿಗೆಯ ಮೂಲಕ ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯ ಮೇಳದೊಂದಿಗೆ ಬೆಟ್ಟಳ್ಳಿ ಮಾರಮ್ಮನ ದೇಗುಲ, ಬಂಡಳ್ಳಿ ರಸ್ತೆ, ಬಸ್ ನಿಲ್ದಾಣ, ಹಳೆ ಎಂಡಿಸಿಸಿ ಬ್ಯಾಂಕ್ ರಸ್ತೆಯಲ್ಲಿ ಸಾಗಿ ಮೈಸೂರು ಮಾರಮ್ಮ ದೇಗುಲಕ್ಕೆ ತಲುಪಿದರು. ಪೂಜೆ ಸಲ್ಲಿಸಿ ಬಾಯಿಬೀಗವನ್ನು ಕಳಚಲಾಯಿತು.
ಸಣ್ಣ ಬಾಯಿಬೀಗ: ಹರಕೆ ಹೊತ್ತ ಭಕ್ತರು ದೊಡ್ಡ ಬಾಯಿಬೀಗವನ್ನು ಹಾಕಿಸಿಕೊಂಡರಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಣ್ಣ ಬಾಯಿಬೀಗವನ್ನು ಹಾಕಿಸಿಕೊಂಡರು. ಬಳಿಕ ವಾದ್ಯದೊಂದಿಗೆ ಮೆರವಣಿಗೆಯ ಮೂಲಕ ಮಹಿಷಾಸುರ ಮರ್ದಿನಿ ದೇಗುಲಕ್ಕೆ ಆಗಮಿಸಿ ಪ್ರದಕ್ಷಿಣೆ ಹಾಕಿ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಹರಕೆ ತೀರಿಸಿದರು.
ಬಾಯಿಬೀಗ ಸೇವೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ದೇಗುಲಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ, ಧೂಪ ಹಾಕಿ ಹಣ್ಣುಕಾಯಿ ನೀಡಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ದೇವಿಗೆ ಹರಕೆ ಕಾಣಿಕೆಯನ್ನು ಸಲ್ಲಿಸಿದರು. ದೇಗುಲದಿಂದ ಪ್ರಸಾದ ವಿನಿಯೋಗ ಮಾಡಲಾಯಿತು.