

ಮೈಸೂರು: ವೈಕುಂಠ ಏಕಾದಶಿ ಅಂಗವಾಗಿ ನಗರದ ವಿವಿಧ ದೇವಾಲಯಗಳಲ್ಲಿ ಶುಕ್ರವಾರ ಭಕ್ತರಿಗೆ ವಿಶೇಷ ದರ್ಶನ, ಪೂಜೆಗೆ ಅವಕಾಶ ಕಲ್ಪಿಸಲಾಗಿತ್ತು.
ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ನಿಂತ ಭಕ್ತರು, ದೇವಾಲಯಗಳಿಗೆ ತೆರಳಿ ವೈಕುಂಠ ದ್ವಾರ (ಸ್ವರ್ಗದ ಬಾಗಿಲು) ಪ್ರವೇಶಿಸಿ, ಪೂಜೆ ಸಲ್ಲಿಸುವ ಮೂಲಕ ಭಕ್ತಿಭಾವ ಮೆರೆದರು.
ಒಂಟಿಕೊಪ್ಪಲಿನ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯ ನಾನಾ ಪೂಜಾ ಕಾರ್ಯಕ್ರಮ ನಡೆದವು. ಮಹಾಮಂಗಳಾರತಿ, ಉತ್ಸವ ಮೂರ್ತಿ ಮೆರವಣಿಗೆ ಮೂಲಕ ಸ್ವರ್ಗದ ಬಾಗಿ ತೆರೆಯಲಾಯಿತು.
ದೇವರಿಗೆ ವಿಶೇಷ ಅಲಂಕಾರ ಮಾಡಿ ಭಕ್ತರಿಗೆ ಮುಂಜಾನೆ 5.30ರಿಂದಲೇ ಪ್ರವೇಶಾವಕಾಶ ಕಲ್ಪಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಬೆಳಗ್ಗೆಯಿಂದ ರಾತ್ರಿವರೆಗೂ ಪ್ರಸಾದ ವಿತರಣೆ ಮಾಡಲಾಯಿತು. ನೂಕು ನುಗ್ಗಲು ಉಂಟಾಗದಂತೆ ಎಚ್ಚರಿಕೆ ವಹಿಸಿ, ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ಸರದಿ ಸಾಲಿನಲ್ಲಿ ಭಕ್ತರನ್ನು ಒಳಬಿಡಲಾಯಿತು.
ವಿಜಯನಗರದ ಶ್ರೀಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ವೈಕುಂಠ ದ್ವಾರ ಪ್ರವೇಶ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ವಿಶೇಷ ಅಲಂಕಾರದೊಂದಿಗೆ ಯೋಗಾನರಸಿಂಹಸ್ವಾಮಿ ಕಂಗೊಳಿಸಿತು.
ದೇವಸ್ಥಾನ ಸಂಸ್ಥಾಪಕ ಪ್ರೊ.ಭಾಷ್ಯಂ ಸ್ವಾಮಿ, ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಅವರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ವಿಜಯನಗರ, ಹೂಟಗಳ್ಳಿ, ಕೂರ್ಗಳ್ಳಿ, ಹಿನಕಲ್ ಸೇರಿದಂತೆ ನಗರದ ಬಹುತೇಕ ಬಡಾವಣೆಗಳ ಭಕ್ತರು ದರ್ಶನ ಪಡೆದರು.