

ಶ್ರೀರಂಗಪಟ್ಟಣ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಶಕ್ತಿದೇವತೆಗಳ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ಸಹಸ್ರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ತಾಲೂಕಿನ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟಿ.ಎಂ.ಹೊಸೂರು ಗೇಟ್ ಬಳಿಯ ಶ್ರೀ ಮಹಾಕಾಳಿ ದೇವಾಲಯದಲ್ಲಿ ಮಠದ ಪೀಠಾಧಿಪತಿ ಗುರುದೇವ್ ನೇತೃತ್ವದಲ್ಲಿ ತಾಯಿ ಮಹಾಕಾಳಿ ದೇವಿಗೆ ಮುಂಜಾನೆ 4.30ರ ಬ್ರಾಹ್ಮಿ ಮೂಹೂರ್ತದಲ್ಲಿ ಪಂಚಾಮೃತ ಅಭಿಷೇಕ, ಮಹಾಪೂಜೆ, ಅಮ್ಮನವರಿಗೆ ಅಲಂಕಾರ, ಭಕ್ತರ ಒಳಿತಿಗೆ ಸಾಮೂಹಿಕ ದೃಷ್ಟಿ ನಿವಾರಣೆ ಹಾಗೂ ಹೋಮ ಕುಂಡಲಿಯಲ್ಲಿ ಪ್ರತ್ಯಂಗೀರಾ ಹೋಮ ಅರ್ಪಿಸಿ ಬಳಿಕ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ವರೆಗೆ ವಿಶೇಷ ಪ್ರಸಾದ ವಿತರಣೆ ಹಾಗೂ ಸಂಜೆ 7.30ಕ್ಕೆ ಕಾಲರಾತ್ರಿ ಆಚರಣೆಯೊಂದಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.
ಮಂಡ್ಯ, ಮೈಸೂರು, ಶ್ರೀರಂಗಪಟ್ಟಣ ಸೇರಿದಂತೆ ಸುತ್ತಮುತ್ತಲ ನೂರಾರು ಗ್ರಾಮಗಳ ಭಕ್ತರು ಹಾಗೂ ಜನರು ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು.
ತಾಲೂಕಿನ ಶಕ್ತಿಕೇಂದ್ರ ಆರತಿ ಉಕ್ಕಡ ಗ್ರಾಮಕ್ಕೆ ಬುಧವಾರ ತಡರಾತ್ರಿಯಿಂದಲೇ ಭಕ್ತರ ಆಗಮನ ಹೆಚ್ಚಾಗಿದ್ದು, ಶಕ್ತಿದೇವಿ ಶ್ರೀ ಅಹಲ್ಯದೇವಿಯ ದರ್ಶನದೊಂದಿಗೆ ತಡೆಯೊಡಿಸಿ ದೃಷ್ಟಿ ತೆಗೆಸಿಕೊಳ್ಳಲು ಸಾವಿರಾರು ಜನರು ಮುಗಿಬಿದ್ದರು. ಇನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಪೊಲೀಸರು ದೇವಾಲಯಕ್ಕೆ ಆಗಮಿಸುವ ಜನದಟ್ಟಣೆ ನಿಯಂತ್ರಿಸಿ ದರ್ಶನ ಹಾಗೂ ಸುಗಮ ವಾಹನ ಸಂಚಾರ ಅನುವು ಮಾಡಿಕೊಟ್ಟರು.
ತಾಲೂಕಿನ ಕೂಡಲಕುಪ್ಪೆ ಗ್ರಾಮದ ಶನೈಶ್ಚರ ಸ್ವಾಮಿ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ಸೂರ್ಯ-ಛಾಯಪುತ್ರನಿಗೆ ದೇವರ ಗುಡ್ಡಪ್ಪ ಗೌತಮ್ ನೇತೃತ್ವದಲ್ಲಿ ವಿವಿಧ ಪೂಜೆ ಹಾಗೂ ಅಲಂಕಾರ ನೆರವೇರಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಕೂಡಲಕುಪ್ಪೆ, ಬಲ್ಲೇನಹಳ್ಳಿ, ಚಿಂದಗಿರಿಕೊಪ್ಪಲು, ನೆಲಮನೆ, ಹನುಮಂತನಗರ ಸೇರಿದಂತೆ ನೂರಾರು ಹಳ್ಳಿಗಳ ಭಕ್ತರು ಮತ್ತು ಗ್ರಾಮಸ್ಥರು ದೇವರ ದರ್ಶನ ಪಡೆದರು. ಪಟ್ಟಣದ ಪ್ರಸಿದ್ಧ ಚಾಮುಂಡೇಶ್ವರಿ ಬೀದಿಯ ಶ್ರೀ ಚಾಮುಂಡೇಶ್ವರಿ ದೇವಿಗೆ ದೇವಾಲಯದ ಪ್ರಧಾನ ಅರ್ಚಕ ಲಕ್ಷ್ಮೀಶಶರ್ಮ ಪಂಚಾಮೃತ ಅಭಿಷೇಕ, ಮಹಾಭೀಷೇಕ, ಅರಿಶಿನ-ಕುಂಕುಮ ಅಭಿಷೇಕದೊಂದಿಗೆ ಮಹಾಪೂಜೆ ಮಹಾಮಂಗಳಾರತಿ ನೆರವೇರಿಸಿ ಬಳಿಕ ಬೆಣ್ಣೆಯಲ್ಲಿ ಶಾರದದೇವಿ ರೂಪದ ಅಲಂಕಾರ ಮಾಡಿದ್ದರು. ಭಕ್ತರು ದೇವಿಯ ದರ್ಶನದೊಂದಿಗೆ ತೀರ್ಥ ಪ್ರಸಾದ ಸ್ವೀಕರಿಸಿದರು.