ಸಂಗಮನಾಥ ಕಲಶದ ದರ್ಶನ ಪಡೆದ ಭಕ್ತರು

29 ksm bangar kalasha
ಕೂಡಲಸಂಗಮದ ಸಂಗಮೇಶ್ವರ ದೇವಾಲಯ ಆವರಣದಲ್ಲಿ ಬಂಗಾರ ಕಲಶದ ಮೆರವಣಿಗೆ ನಡೆಯಿತು.
Published on

ಕೂಡಲಸಂಗಮ: ಸಂಗಮನಾಥನ ಕಲಶದ ದರ್ಶನ ಪಡೆಯಲು ರಾಜ್ಯ ಮಾತ್ರವಲ್ಲದೆ ನೆರೆಯ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಕೆಲವು ಭಕ್ತರು ಬಂಗಾರದ ಕಲಶ ಹೊತ್ತು ನಡೆದರೆ ಇನ್ನೂ ಕೆಲವರು ಸ್ಪರ್ಶಿಸಿ ಸಂಭ್ರಮ ಪಟ್ಟರು.

ಬಾಗಲಕೋಟೆ ಜಿಲ್ಲಾ ಖಜಾನೆಯಲ್ಲಿ ವರ್ಷವಿಡೀ ಭದ್ರತೆಯಲ್ಲಿರುವ ಸಂಗಮೇಶ್ವರ ಬಂಗಾರದ ಕಲಶವು ಜಾತ್ರೆ ನಿಮಿತ್ತ 3 ದಿನ ಮಾತ್ರ ಭಕ್ತರ ದರ್ಶನಕ್ಕೆ ದೊರೆಯಲಿದೆ. ಭಾನುವಾರ ಬೆಳಗ್ಗೆ 9ಕ್ಕೆ ಬಾಗಲಕೋಟೆ ತಹಸೀಲ್ದಾರ್ ಕಚೇರಿಯಲ್ಲಿ ಕಳಸದ ಬಾಬುದಾರರು 72 ಗಂಟೆಯಲ್ಲಿ ಕಲಶ ಮರಳಿ ತಲುಪಿಸುತ್ತೇವೆ ಎಂಬ ಷರತ್ತು ಬದ್ಧ ಮುಚ್ಚಳಿಕೆ ಪತ್ರಕೊಟ್ಟು ಪೊಲೀಸ್ ಭದ್ರತೆಯಲ್ಲಿ ರಾತ್ರಿ ಇಡೀ ಪಾದಯಾತ್ರೆಯಲ್ಲಿ ಹಳೇ ಮಲ್ಲಾಪುರ, ಕಿರಸೂರ, ಭಗವತಿ, ಹಳ್ಳೂರ, ಬೇವೂರ ಮಾರ್ಗದ ಮೂಲಕ ಸೋಮವಾರ ಬೆಳಗ್ಗೆ ಕೂಡಲಸಂಗಮಕ್ಕೆ ಆಗಮಿಸಿತು.

47 ಕಿಮೀ ದೂರದ ಮಾರ್ಗದುದ್ದಕ್ಕೂ ವಿವಿಧ ಗ್ರಾಮದ ಭಕ್ತರು ಸಂಭ್ರಮದಿಂದ ಬಂಗಾರದ ಕಲಶ ಸ್ವಾಗತಿಸಿ, ಪೂಜೆ, ಮೆರವಣಿಗೆ ಮಾಡಿ ಗ್ರಾಮಕ್ಕೆ ಕಳಹಿಸಿದರು. ಹಲವಾರು ಭಕ್ತರು ಪ್ರಸಾದ, ತಂಪು ಪಾನೀಯ, ಹಣ್ಣುಗಳನ್ನು ವಿತರಿಸಿದರು.

ಅಂದಾಜು 16 ಸಾವಿರಕ್ಕೂ ಅಧಿಕ ಪುರುಷರು, 4 ಸಾವಿರಕ್ಕೂ ಅಧಿಕ ಮಹಿಳೆಯರು ಇದ್ದರು.

10 ಗಂಟೆಗೆ ಕೂಡಲಸಂಗಮಕ್ಕೆ ಆಗಮಿಸುತ್ತಿದ್ದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಕಲಾ ತಂಡಗಳು ನೃತ್ಯ ಪ್ರದರ್ಶಿಸುತ್ತ ಸಂಗಮೇಶ್ವರ ದೇವಾಲಯಕ್ಕೆ ಆಗಮಿಸಿದವು.

ವಿವಿಧ ಗ್ರಾಮಗಳ ಮಹಿಳೆಯರು ಆರತಿಯೊಂದಿಗೆ ಕಲಶದ ಹಿಂದೆ ಸಂಗಮನಾಥನ ದೇವಾಲಯದಲ್ಲಿ ಐದು ಸುತ್ತು ಪ್ರದಕ್ಷಿಣೆ ಹಾಕಿ ಸಂಗಮನಾಥನಿಗೆ ಪೂಜೆ ಸಲಿಸಿದರು.

ದೇವಾಲಯದಿಂದ ಬಸವೇಶ್ವರ ವೃತ್ತದಲ್ಲಿನ ಕಲಶ ಕಟ್ಟೆವರೆಗೆ ಮೆರವಣಿಗೆಯಲ್ಲಿ ಕಲಶಗಳನ್ನು ತರಲಾಯಿತು. ಬಳಿಕ ಗ್ರಾಮಸ್ಥರು ಕಲಶಕ್ಕೆ ದೀಡ್ ನಮಸ್ಕಾರ ಹಾಕುವ ಮೂಲಕ ಭಕ್ತಿ ಮೆರೆದರು.

ಬಂಗಾರದ ಕಲಶ ನೋಡುವುದೇ ನಮ್ಮ ಭಾಗ್ಯ. ನಮ್ಮ ಬಯಕೆಗಳು ಈಡೇರಿವುದುದಕ್ಕಾಗಿ ಕಲಶದ ಜತೆಗೆ ಪಾದಯಾತ್ರೆಯಲ್ಲಿ ಬರುತ್ತೇವೆ ಎಂದು ಭಕ್ತರು ತಿಳಿಸಿದರು. ಹಿಂದು, ಮುಸ್ಲಿಂ ಹಾಗೂ ಬೌದ್ಧರೂ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net