ಶಿಷ್ಯ ಸ್ವೀಕಾರ ಕಣ್ತುಂಬಿಕೊಳ್ಳಲು ಕಾತುರರಾದ ಭಕ್ತರು

17sirsi3a
Published on

ಶಿರಸಿ: ತಾಲೂಕಿನ ಸ್ವರ್ಣವಲ್ಲೀ ಸಂಸ್ಥಾನದಲ್ಲೀಗ ಮಹತ್ತರ ಕ್ಷಣಗಳು ಬಂದಿವೆ. ಹಸಿರು ಸ್ವಾಮೀಜಿ ಎಂದೇ ಪ್ರಸಿದ್ಧರಾಗಿರುವ, ಕೃಷಿಕರ ಬೆನ್ನೆಲುಬಾಗಿ ಧರ್ಮ ರಕ್ಷಣೆ ಮಾಡುತ್ತಿರುವ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ಶಿಷ್ಯ ಸ್ವೀಕಾರ ಕಾರ್ಯಕ್ರಮ ಫೆ. 18ರಿಂದ 22ರವರೆಗೆ ನಡೆಯಲಿದ್ದು, ಈ ಕ್ಷಣ ಕಣ್ತುಂಬಿಕೊಳ್ಳಲು ಭಕ್ತರು ಕಾತುರರಾಗಿದ್ದಾರೆ.

ಅಹಿಚ್ಛತ್ರದ ಗುಣನಿಧಿ ಎಂಬ ಬಾಲಕನಿಗೆ ಶಂಕರ ಭಗವತ್ಪಾದರ ಸಮ್ಮುಖದಲ್ಲಿ ಶ್ರೀ ಭಾಸ್ಕರೇಂದ್ರ ಸರಸ್ವತೀ ಸ್ವಾಮೀಜಿ ಸನ್ಯಾಸ ದೀಕ್ಷೆ ನೀಡುವ ಮೂಲಕ ಸ್ವರ್ಣವಲ್ಲೀ ಸಂಸ್ಥಾನದ ಗುರು ಪರಂಪರೆ ಆರಂಭಗೊಂಡಿದೆ. ಈ ಪರಂಪರೆಯ ಈಗಿನ ಶ್ರೀಗಳಾದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಠದ ಮುಂದಿನ ಉತ್ತರಾಧಿಕಾರಿಯಾಗಿ ಶಿಷ್ಯ ಸ್ವೀಕಾರ ಮಾಡುವ ಬಯಕೆಯನ್ನು ಕೆಲ ವರ್ಷಗಳ ಹಿಂದೆಯೇ ವ್ಯಕ್ತಪಡಿಸಿದ್ದರು. ಸ್ವರ್ಣವಲ್ಲೀ ಸಂಸ್ಥಾನದಲ್ಲಿಯೇ ವೇದ ವ್ಯಾಸಂಗ ಮಾಡಿದ, ಯಲ್ಲಾಪುರ ತಾಲೂಕಿನ ಈರಾಪುರದ ವೇ. ನಾಗರಾಜ ಭಟ್ ಅವರನ್ನು ಶಿಷ್ಯನನ್ನಾಗಿ ಸ್ವೀಕರಿಸಲು ನಿರ್ಣಯಿಸಿ, ಈಗ ಈ ಕಾರ್ಯಕ್ರಮಕ್ಕೆ ಸ್ವರ್ಣವಲ್ಲೀ ಸಂಸ್ಥಾನ ಸಿದ್ಧಗೊಂಡಿದೆ.

ಒಟ್ಟು 50 ಸಾವಿರ ಜನರ ಆಗಮನ ನಿರೀಕ್ಷೆ

ಒಟ್ಟು 5 ದಿನಗಳ ಶಿಷ್ಯ ಸ್ವೀಕಾರ ಕಾರ್ಯಕ್ರಮದಿಂದ 50 ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಮಠದ ಎದುರಿನಲ್ಲಿಯೇ 20 ವಿಶೇಷ ಕೌಂಟರ್ ತೆರೆದಿದ್ದು, 16 ಸೀಮೆ ಭಕ್ತರಿಗೆ ಪ್ರತ್ಯೇಕ ಕೌಂಟರ್ ಆರಂಭಿಸಲಾಗಿದೆ. ಹೊರೆ ಕಾಣಿಕೆಯನ್ನು ಇಲ್ಲಿಯೇ ಸಮರ್ಪಿಸುವ ವ್ಯವಸ್ಥೆ ಮಾಡಲಾಗಿದೆ.

ಮಠದ ಹಿಂಭಾಗದ ವಿಶಾಲ ಮೈದಾನದಲ್ಲಿ ಸಭಾ ಕಾರ್ಯಕ್ರಮ ಮತ್ತು ಬರುವ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಅಡುಗೆ ಮತ್ತು ಕುಡಿಯಲು ಫಿಲ್ಟರ್ ನೀರು ಬಳಸಲಾಗುತ್ತಿದೆ. ಶನಿವಾರ 16 ಸೀಮೆಗಳಿಂದ ಆಗಮಿಸಿದ ಮಹಿಳೆಯರು ಲಾಡು ಕಟ್ಟುವ ಕಾರ್ಯ ನಡೆಸಿದ್ದಾರೆ. ಮಠದ ಆವರಣದಲ್ಲಿ ಯಾಗ ಶಾಲೆ ನಿರ್ವಿುಸಲಾಗಿದೆ. ಇಲ್ಲಿ 4 ಯಜ್ನಕುಂಡಗಳಲ್ಲಿ ಐದು ದಿನಗಳೂ ಹೋಮ ಕಾರ್ಯಕ್ರಮ ನಡೆಯಲಿದೆ. ಒಟ್ಟು 80 ವೈದಿಕರು ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು ಪೂಜೆಯನ್ನು ಶಂಕರಾಚಾರ್ಯ ಪರಂಪರೆಗೆ ಅನುಗುಣವಾಗಿ ನಡೆಸಲಿದ್ದಾರೆ.

ಕಾರ್ಯಕ್ರಮದ ಸಿದ್ಧತೆ ಕುರಿತಂತೆ ಮಾಹಿತಿ ನೀಡಿದ ಮಠದ ಅಧ್ಯಕ್ಷ ವಿ. ಎನ್. ಹೆಗಡೆ ಬೊಮ್ನಳ್ಳಿ, 11 ಸಮಿತಿಗಳ ಮೂಲಕ ಕಾರ್ಯಕ್ರಮದ ಸಿದ್ಧತೆ ಕಾರ್ಯ ನಡೆಯುತ್ತಿದೆ. ಐದು ದಿನಗಳ ಕಾಲ ಆಗಮಿಸುವ ಭಕ್ತರಿಗೆ 9 ಕಡೆಗಳಲ್ಲಿ ರ್ಪಾಂಗ್ ವ್ಯವಸ್ಥೆ ಮಾಡಲಾಗಿದೆ. ಮೂರು ಸಾವಿರದಷ್ಟು ವಾಹನಗಳನ್ನು ಏಕಕಾಲಕ್ಕೆ ನಿಲ್ಲಿಸಬಹುದಾಗಿದೆ. ನಾಲ್ಕು ಸಾವಿರ ಭಕ್ತರು ಏಕಕಾಲಕ್ಕೆ ಊಟ ಮಾಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಫೆ. 18, 19 ಮತ್ತು 20ರಂದು ಸಭಾ ಕಾರ್ಯಕ್ರಮಗಳು ಮಠದ ಅಕ್ಷಯ ಭವನದಲ್ಲಿ ನಡೆಯಲಿವೆ. 21 ಮತ್ತು 22ರಂದು ಸರ್ವಜ್ನೇಂದ್ರ ಸರಸ್ವತೀ ಸ್ವಾಮೀಜಿ ಸಭಾಭವನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಸ್ವರ್ಣವಲ್ಲೀಯಲ್ಲಿ ಇಂದು

ಬೆಳಗ್ಗೆ ಗಣಪತಿ ಪೂಜೆ, ಪುಣ್ಯಾಹ, ಸಂಕಲ್ಪ, ಗೋದಾನ, ಕೂಷ್ಮಾಂಡ ಹವನ, ಬ್ರಹ್ಮಣಸ್ಪತಿಸೂಕ್ತ ಹವನ, ಒಂದು ಲಕ್ಷ ಗಾಯತ್ರೀ ಜಪ, ದಶಾಂಶ ಹವನ, ಐದು ವೇದಗಳ ಪಾರಾಯಣ ಪ್ರಾರಂಭ ಮಹಾರುದ್ರ ಜಪ ಪ್ರಾರಂಭ.

ಮಧ್ಯಾಹ್ನ 3.30ರಿಂದ ಸಭಾ ಕಾರ್ಯಕ್ರಮ: ಶ್ರೀಗಳ ಪೀಠಾರೋಹಣದಿಂದ ಇಲ್ಲಿಯವರೆಗಿನ ಪ್ರಮುಖ ಸನ್ನಿವೇಶಗಳ ಚಿತ್ರ ಸಂಪುಟ ಸ್ವರ್ಣಶ್ರೀ ಗ್ರಂಥ ಲೋಕಾರ್ಪಣೆ. ದಿವ್ಯ ಸಾನ್ನಿಧ್ಯ: ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಉಪಸ್ಥಿತಿ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತಕುಮಾರ ಹೆಗಡೆ, ಶಾಸಕರಾದ ಆರ್.ವಿ. ದೇಶಪಾಂಡೆ, ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ, ದಿನಕರ ಶೆಟ್ಟಿ, ಶಾಂತಾರಾಮ ಸಿದ್ದಿ, ಗಣಪತಿ ಉಳ್ವೇಕರ್.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ: ನಾರಾಯಣ ದಾಸರಿಂದ ಕೀರ್ತನೆ.

ಸ್ವರ್ಣವಲ್ಲೀಯ ಗುರು ಪರಂಪರೆಯ ಬಳ್ಳಿಗೆ ಈಗ ಹೊಸ ಚಿಗುರು ಸೇರ್ಪಡೆಗೊಳ್ಳುತ್ತಿದೆ. ಒಂದು ಅಪರಂಜಿಯನ್ನು ನಾವು ಪಡೆದಿದ್ದೇವೆ. ಈ ಅಪರಂಜಿಗೆ ಸ್ವಲ್ಪ ಗಟ್ಟಿತನ ಮೂಡಿಸುವ ಕೆಲಸವಿದೆ. ಶಿಷ್ಯ ಸ್ವೀಕಾರದ ಈ ಸಂದರ್ಭಕ್ಕೆ ಎಲ್ಲ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಈ ಕಾರ್ಯಕ್ರಮದ ಕಾರ್ಯಕರ್ತರು ಆಮಂತ್ರಣವನ್ನು ಎಲ್ಲೆಡೆ ಕೊಟ್ಟಿದ್ದಾರೆ. ಆಮಂತ್ರಣ ಪತ್ರಿಕೆ ತಲುಪದವರು ತಪ್ಪು ತಿಳಿದುಕೊಳ್ಳದೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಸ್ವರ್ಣವಲ್ಲೀ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net