

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಕಳೆದ 2 ದಿನಗಳಿಂದ ಕಾಲ್ನಡಿಗೆಯ ಮೂಲಕ ಮ.ಬೆಟ್ಟಕ್ಕೆ ತೆರಳುತ್ತಿದ್ದಾರೆ.
ಮ.ಬೆಟ್ಟದಲ್ಲಿ 5 ದಿನಗಳ ಕಾಲ ನಡೆಯುವ ದೀಪಾವಳಿ ಜಾತ್ರೆಗೆ ಪ್ರತಿ ವರ್ಷ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಕಾಲ್ನಡಿಗೆ ಮೂಲಕ ಮ.ಬೆಟ್ಟಕ್ಕೆ ತೆರಳಿ ಅಲ್ಲಿಯೇ 4-5 ದಿನಗಳ ಕಾಲ ವಾಸ್ತವ್ಯ ಹೂಡುತ್ತಾರೆ. ಈ ವೇಳೆ ನಡೆಯುವ ವಿವಿಧ ಉತ್ಸವಗಳು, ಹರಕೆ ಸೇವೆಗಳು ಹಾಗೂ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ. ಈ ಹಿಂದೆ ಜಾತ್ರೆ ಇನ್ನೇನು 4-5 ದಿನಗಳು ಬಾಕಿ ಇರುವಾಗ ಮಾತ್ರ ಹೆಚ್ಚಿನ ಭಕ್ತರು ಪಾದಯಾತ್ರೆ ಕೈಗೊಂಡು ಜಾತ್ರಾ ಸಮಯದಲ್ಲಿ ಮ.ಬೆಟ್ಟದಲ್ಲೇ ಬೀಡು ಬಿಡುತ್ತಿದ್ದರು. ಈ ವರ್ಷ ಮ.ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವವು ಅ.18ರಿಂದ ಆರಂಭವಾಗಲಿದೆ. ಆದರೆ ಜಾತ್ರೆಯಲ್ಲಿ ಹೆಚ್ಚು ಜನಸಂದಣಿಯಾಗುವ ಹಿನ್ನೆಲೆಯಲ್ಲಿ ಈಗಾಗಲೇ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಕೊಳ್ಳೇಗಾಲ - ಹನೂರು ಮಾರ್ಗವಾಗಿ ಕಾಲ್ನಡಿಗೆ ಮೂಲಕ ಮ.ಬೆಟ್ಟಕ್ಕೆ ತೆರಳುತ್ತಿದ್ದು, ತಾಳುಬೆಟ್ಟದಲ್ಲಿ ರಾತ್ರಿ ವಾಸ್ತವ್ಯ ಹೂಡಿ ಮ.ಬೆಟ್ಟಕ್ಕೆ ತಲುಪುತ್ತಿದ್ದಾರೆ.
ಮ.ಬೆಟ್ಟದತ್ತ ಹೆಜ್ಜೆ ಹಾಕುತ್ತಿರುವ ಭಕ್ತರು: ಕಳೆದ 2 ದಿನಗಳಿಂದ ಚಾಮರಾಜನಗರ ಸೇರಿದಂತೆ ಮೈಸೂರು, ಮಂಡ್ಯ, ರಾಮನಗರ, ಹೆಚ್.ಡಿ ಕೋಟೆ, ನಂಜನಗೂಡು, ನರಸೀಪುರ ಹಾಗೂ ಮಳವಳ್ಳಿ ಕಡೆಗಳಿಂದ ಹೆಚ್ಚಿನ ಭಕ್ತರು ಕಾಲ್ನಡಿಗೆಯಲ್ಲಿ ಮ.ಬೆಟ್ಟಕ್ಕೆ ತೆರಳುತ್ತಿದ್ದಾರೆ. ಇದರಲ್ಲಿ ಈ ಬಾರಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿರುವುದು ಒಂದೆಡೆಯಾದರೆ, ವಿವಿಧ ಗ್ರಾಮದ ಗ್ರಾಮಸ್ಥರು ಮಾರ್ಗಮಧ್ಯದಲ್ಲಿ ಅಡುಗೆ ತಯಾರಿಸಿ ಒಟ್ಟಿಗೆ ಸೇರಿ ಸಹಭೋಜನಾ ಸ್ವೀಕರಿಸಿ ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಾ ತಂಡೋಪತಂಡವಾಗಿ ಶ್ರೀ ಕ್ಷೇತ್ರದ ಕಡೆ ಪಯಣ ಬೆಳೆಸುತ್ತಿದ್ದಾರೆ. ಹಾಗೆಯೇ ಮಾದಪ್ಪನ ದೇವರ ಗುಡ್ಡರು ಭಕ್ತಿಭಾವದಿಂದ ಕಂಸಾಳೆ ಬಾರಿಸುತ್ತಾ ಮಾದಪ್ಪನ ಹಾಡನ್ನು ಹಾಡುತ್ತಾ ತೆರಳಿದರೆ, ಮಹಿಳೆಯರ ಗುಂಪು ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಘೋಷಣೆಗಳನ್ನು ಕೂಗುತ್ತಾ ಉತ್ಸಾಹದಿಂದ ಮ.ಬೆಟ್ಟದತ್ತ ಹೆಜ್ಜೆ ಹಾಕುತ್ತಿರುವುದು ಕಳೆದ 2 ದಿನಗಳಿಂದ ಹನೂರು ಭಾಗದಲ್ಲಿ ಕಂಡು ಬರುತ್ತಿದೆ. ಇನ್ನು ದೀಪಾವಳಿ ಜಾತ್ರೆ ಸಮೀಪಿಸುತ್ತಿದ್ದಂತೆಯೇ ಮ.ಬೆಟ್ಟಕ್ಕೆ ಮುಂದಿನ ದಿನಗಳಲ್ಲೂ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ದೀಪಾವಳಿ ಜಾತ್ರಾ ವೇಳೆ ಮ.ಬೆಟ್ಟದಲ್ಲಿ ಭಕ್ತ ಗಣ ತುಂಬಿ ತುಳುಕಲಿದೆ.