

ಹನೂರು: ಮಹಾಲಯ ಅಮಾವಾಸ್ಯೆ ಜಾತ್ರೆ ಹಿನ್ನೆಲೆಯಲ್ಲಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ ಕಳೆದ 2 ದಿನಗಳಿಂದ ಭಕ್ತರು ಕಾಲ್ನಡಿಗೆಯ ಮೂಲಕ ತೆರಳುತ್ತಿದ್ದಾರೆ.
ಮ.ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಅ.2 ರಂದು ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನಡೆಯಲಿದೆ. ಪ್ರತಿ ವರ್ಷ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಚನ್ನಪಟ್ಟಣ, ಚಾ.ನಗರ, ಮದ್ದೂರು, ಮಳವಳ್ಳಿ ಹಾಗೂ ನಂಜನಗೂಡು ಹಾಗೂ ಇನ್ನಿತರ ಕಡೆಗಳಿಂದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಹಾಗೆಯೇ ಕಾಲ್ನಡಿಗೆ ಮೂಲಕ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಕಳೆದ 2 ದಿನಗಳಿಂದ ಮೈಸೂರು, ತಿ.ನರಸೀಪುರ, ಮಳವಳ್ಳಿ, ನಂಜನಗೂಡು, ಯಳಂದೂರು ಹಾಗೂ ಚಾ.ನಗರದಿಂದ ಹೆಚ್ಚಿನ ಭಕ್ತರು ಹನೂರು ಮಾರ್ಗವಾಗಿ ಮ.ಬೆಟ್ಟಕ್ಕೆ ಕಾಲ್ನಡಿಗೆಯ ಮೂಲಕ ತೆರಳುತ್ತಿರುವುದು ಕಂಡು ಬರುತ್ತಿದೆ.
ಮಾದಪ್ಪನ ದೇವರ ಗುಡ್ಡರು ಕಂಸಾಳೆ ಬಾರಿಸುತ್ತಾ, ಮಹದೇಶ್ವರರ ಹಾಡು ಹೇಳುತ್ತಾ ಭಕ್ತಿಯಿಂದ ಹೆಜ್ಜೆ ಹಾಕುತ್ತಿದ್ದಾರೆ. ಮಹಿಳೆಯರು, ಮಕ್ಕಳು ಹಾಗೂ ಯುವಕರು ಮಾದಪ್ಪನ ಘೋಷಣೆಗಳನ್ನು ಮೊಳಗಿಸುತ್ತಾ ಅಲ್ಲಲ್ಲಿ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆದು ಸಹಭೋಜನ ಸವಿದು ತೆರಳುತ್ತಿದ್ದಾರೆ. ತಾಳುಬೆಟ್ಟದಲ್ಲಿ ವಾಸ್ತವ್ಯ ಹೂಡಿ ಮ.ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಇದರಿಂದ ಮ.ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆಗೆ ಹೆಚ್ಚು ಭಕ್ತರು ಸೇರಲಿದ್ದಾರೆ.