ಬೆಂದ್ರ್‌ತೀರ್ಥದಲ್ಲಿ ಭಕ್ತರಿಂದ ತೀರ್ಥಸ್ನಾನ

New Project
Published on

ಪುತ್ತೂರು ಗ್ರಾಮಾಂತರ: ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ಬುಗ್ಗೆ (ಚಿಲುಮೆ) ಎಂಬ ಖ್ಯಾತಿಯ ಇರ್ದೆ ಗ್ರಾಮದ ಬೆಂದ್ರ್‌ತೀರ್ಥ ಕ್ಷೇತ್ರದಲ್ಲಿ ಶನಿವಾರ ತೀರ್ಥ ಅಮಾವಾಸ್ಯೆ ಪ್ರಯುಕ್ತ ಸಾವಿರಾರು ಭಕ್ತರು ತೀರ್ಥಸ್ನಾನ ಮಾಡಿದರು.

ಅಮಾವಾಸ್ಯೆ ದಿನವಾದ ಶನಿವಾರ ನಸುಕಿನ ವೇಳೆ 4 ಗಂಟೆಗೆ ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಹಾಯಕ ಅರ್ಚಕರು ತೀರ್ಥಗುಂಡಿಯಲ್ಲಿ ಪೂಜೆ ಮಾಡಿದರು. ಬಳಿಕ ಅಶ್ವಥ ಕಟ್ಟೆಯಲ್ಲಿ ಪೂಜೆ ನೆರವೇರಿಸಲಾಯಿತು. ನಂತರ ಭಕ್ತರಿಂದ ತೀರ್ಥ ಸ್ನಾನ ಆರಂಭ ವಾಯಿತು. ಅಮಾವಾಸ್ಯೆ ತೀರ್ಥಸ್ನಾನದ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆ ವೇಳೆಯಿಂದಲೇ ಬೆಂದ್ರ್‌ತೀರ್ಥ ಕ್ಷೇತ್ರಕ್ಕೆ ತೀರ್ಥಸ್ನಾನ ಮಾಡಲು ಭಕ್ತರು ಸೇರತೊಡಗಿದ್ದರು. 3 ಸಾವಿರಕ್ಕಿಂತಲೂ ಅಧಿಕ ಭಕ್ತರು ಪುಣ್ಯತೀರ್ಥ ಸ್ನಾನ ಮಾಡಿದರು.

ತೀರ್ಥಸ್ನಾನಕ್ಕಾಗಿ ಬಂದ ಭಕ್ತರಿಗೆ ಇರ್ದೆಯ ಸಮರ್ಪಣಾ ಸೇವಾ ಟ್ರಸ್ಟ್, ಇರ್ದೆಯ ವಿಷ್ಣು ಮಹಿಳಾ ಮಂಡಲ, ಸ್ಥಳೀಯರಾದ ಅನಂತ ಭಟ್ ದರ್ಬೆ, ಗಂಗಾಧರ ಆಳ್ವ ಬಾಲ್ಯೊಟ್ಟು, ಪ್ರಮೋದ್ ಭಟ್ ಗುಮ್ಮಟಗದ್ದೆ, ಪ್ರಸಾದ್ ಭಟ್ ಘಾಟೆ ಅವರು ಬೆಳಗ್ಗಿನ ಉಪಾಹಾರದ ವ್ಯವಸ್ಥೆ ಮಾಡಿದ್ದರು. ಉಪ್ಪಳಿಗೆಯ ಭಗತ್‌ಸಿಂಗ್ ಸೇವಾ ಯುವಶಕ್ತಿ ಸಂಘಟನೆ ಮತ್ತು ಶಿವಾಜಿ ಯುವಸೇನೆ ಬೆಂದ್ರ್‌ತೀರ್ಥ ಸಂಘಟನೆ ಸ್ವಚ್ಛತೆ, ಅಲಂಕಾರ ಹಾಗೂ ಇನ್ನಿತರ ಕಾರ್ಯಗಳಲ್ಲಿ ಸ್ವಯಂಸೇವಕರಾಗಿ ತೀರ್ಥಸ್ನಾನದ ಯಶಸ್ವಿಗಾಗಿ ಸಹಕರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net