ಭಕ್ತರು ಧರ್ಮದ ಅಂಶಗಳನ್ನು ಅನುಷ್ಠಾನಗೊಳಿಸಲಿ : ಶ್ರೀಸಿದ್ಧಲಿಂಗ ಶಿವಾನಂದ ಸ್ವಾಮೀಜಿ

15
Published on

ಮೈಸೂರು: ಶ್ರೀಮಠದ ಭಕ್ತರು, ಪ್ರವಚನದಲ್ಲಿ ಕೇಳಿದ ಸತ್ಕಾರ್ಯಗಳನ್ನು, ಧರ್ಮದ ಅಂಶಗಳನ್ನು ಅನುಷ್ಠಾನಗೊಳಿಸಬೇಕು. ಆಗ ಮಾತ್ರ ಪ್ರವಚನದಂಥ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಕ್ಕೂ ಸಾರ್ಥಕತೆ ಬರುತ್ತದೆ ಎಂದು ಹುಲಿಯೂರು ದುರ್ಗದ ಶ್ರೀಸಿದ್ಧಲಿಂಗ ಶಿವಾನಂದ ಸ್ವಾಮೀಜಿ ಹೇಳಿದರು.

ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಶನಿವಾರ ಆಯೋಜಿಸಿದ್ದ ಶ್ರಾವಣಮಾಸ ಪೂಜಾನುಷ್ಠಾನ ಮತ್ತು ಪ್ರವಚನ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.

ಶ್ರಾವಣ ಮಾಸದಲ್ಲಿ ನಿತ್ಯ ಒಂದು ಗಂಟೆಗಳ ಕಾಲ ಪ್ರವಚನವನ್ನು ಆಲಿಸಿರುವುದರಿಂದ ತಿಂಗಳಲ್ಲಿ ಮೂವತ್ತು ಗಂಟೆಗಳನ್ನು ಇದಕ್ಕೆ ಸಮರ್ಪಿಸಿಕೊಂಡಿರುವ ಶ್ರೀ ಮಠದ ಭಕ್ತರು ಸತ್ಕಾರ್ಯ, ಧರ್ಮದ ಅಂಶಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಾರ್ಥಕತೆ ಪಡೆದುಕೊಳ್ಳಬೇಕು ಎಂದು ಹೇಳಿದರು.

ನಮ್ಮ ಧರ್ಮ-ಸಂಸ್ಕೃತಿ ಉಳಿದುಕೊಂಡು ಮುಂದಿನ ಪೀಳಿಗೆಗೆ ಪಸರಿಸಬೇಕಾದರೆ ಕಾಲ-ಕಾಲಕ್ಕೆ ಧಾರ್ಮಿಕ ಪ್ರಚನಗಳನ್ನು ನಡೆಸುವುದು ಅವಶ್ಯ. ಶರಣ ಪರಂಪರೆಯಲ್ಲಿ ಬರುವ ಮಲೆ ಮಹದೇಶ್ವರರು ಯಾವುದೇ ಮೂಲಸೌಕರ್ಯವಿಲ್ಲದ, ಗುಡ್ಡಗಾಡು ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಜನರನ್ನು ನಾಗರಿಕರನ್ನಾಗಿ ಪರಿವರ್ತನೆ ಮಾಡಿ, ಅವರ ಬದುಕಿಗೆ ಒಂದು ಅರ್ಥವನ್ನು ಕಲ್ಪಿಸಿದರು ಎಂದು ಬಣ್ಣಿಸಿದರು.

ಅಂಥ ಕಾಡಿನ ಜನರನ್ನೇ ಪರಿವರ್ತನೆ ಮಾಡಿರುವ ಗುರು ಹಾಗೂ ಧಾರ್ಮಿಕ ಪರಂಪರೆಯು ಈಗಲೂ ಮುಂದುವರಿಸಿಕೊಂಡು ಬರಲಾಗುತ್ತಿದೆ. ತನ್ಮೂಲಕ ನಾಗರಿಕರ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ಇದಕ್ಕಾಗಿ ಇಂತಹ ಪ್ರವಚನ ಕಾರ್ಯಗಳು ನಡೆಯುತ್ತಿದೆ ಎಂದರು.

ಲಕ್ಕಣ್ಣ ದಂಡೇಶ ವಿರಚಿತ ‘ಶಿವತತ್ವ ಚಿಂತಾಮಣಿ’ ಕೃತಿಯೂ ನಮಗೆ ಧರ್ಮದ ಮೌಲ್ಯಗಳನ್ನು ತಿಳಿಸುತ್ತದೆ. ನಮ್ಮ ನಾಡಿನ ಐತಿಹ್ಯಗಳ ಬಗ್ಗೆ ಮಾಹಿತಿ ನೀಡುತ್ತದೆ. ಈ ಕೃತಿಯನ್ನು ಪ್ರವಚನದ ಮೂಲಕ ಆಲಿಸುವುದರಿಂದ ನಮಗೆ ಧರ್ಮದ ಜ್ಞಾನವೂ ವೃದ್ಧಿಯಾಗುತ್ತದೆ ಎಂದು ಹೇಳಿದರು.

ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಉಪ ನಿರ್ದೇಶಕ ಎಲ್.ಮೇಘಲಾ ಅವರು, ಉತ್ತಮ ಶ್ರೋತೃಗಳಿಗೆ ಬಹುಮಾನ ವಿತರಣೆ ಮಾಡಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಗರ ಮಾಪನ ಯೋಜನಾಧಿಕಾರಿ ಜಿ.ಸೀಮಂತಿನಿ ಅಧ್ಯಕ್ಷತೆ ವಹಿಸಿದ್ದರು.

ಕುದೇರು ಮಠದ ಶ್ರೀಇಮ್ಮಡಿ ಗುರುಲಿಂಗಸ್ವಾಮೀಜಿ, ಶ್ರೀವೀರರುದ್ರ ಶಿವಾಚಾರ್ಯ ಸ್ವಾಮೀಜಿ, ಪ್ರವಚನಕಾರರಾದ ಡಾ.ಕೆ.ಅನಂತರಾಮು, ಡಾ.ಬಿ.ವಿ.ವಸಂತಕುಮಾರ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಶಿವಕುಮಾರಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net