

ಗಜೇಂದ್ರಗಡ: ಕಳೆದ ಒಂದು ತಿಂಗಳಿನಿಂದ ತೆಂಗಿನಕಾಯಿ ದರ ದುಪ್ಪಟ್ಟಾಗಿದ್ದು, ಗ್ರಾಹಕರು ಹಾಗೂ ಭಕ್ತರಿಗೆ ಬಿಸಿ ತಟ್ಟಿದೆ.
ಗಜೇಂದ್ರಗಡ ತಾಲೂಕಿಗೆ ಹಿರಿಯೂರು, ತುಮಕೂರು, ಬೆಂಗಳೂರನಿಂದ ತೆಂಗಿನಕಾಯಿಗಳ ಆವಕ ಆಗುತ್ತದೆ. ತೆಂಗಿನ ಗಿಡಗಳಿಗೆ ನುಸಿರೋಗ, ತೇವಾಂಶ ಹೆಚ್ಚಳದಿಂದ ಮರದಲ್ಲಿದ್ದ ಸಣ್ಣ ಸಣ್ಣ ಕಾಯಿಗಳು ಉದುರುತ್ತಿವೆ. ಕೀಟಗಳ ಕಾಟವೂ ಉಲ್ಬಣಿಸಿದೆ. ಹೀಗಾಗಿ ಅನೇಕರು ತೆಂಗಿನ ಗಿಡಗಳನ್ನು ಕತ್ತರಿಸಿ ಹಾಕಿದ್ದರಿಂದ ಇಳುವರಿ ಕಡಿಮೆಯಾಗಿದೆ.
ತಾಲೂಕಿನ ಸುಕ್ಷೇತ್ರಗಳಾದ ಇಟಗಿ ಭೀಮಾಂಬಿಕಾದೇವಿ, ಕಾಲಕಾಲೇಶ್ವರ ದರ್ಶನಕ್ಕೆ ಶ್ರಾವಣಮಾಸದಲ್ಲಿ ರಾಜ್ಯ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಅಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರು ತೆಂಗಿನಕಾಯಿ ವ್ಯಾಪಾರವನ್ನೇ ನೆಚ್ಚಿಕೊಂಡಿದ್ದಾರೆ. ಎರಡು ತಿಂಗಳಲ್ಲಿ ತೆಂಗಿನಕಾಯಿ ದರ ದುಪ್ಪಟ್ಟಾಗಿದೆ. ಸಣ್ಣ ಗಾತ್ರದ ಕಾಯಿ ದರ 15ರಿಂದ 20 ರೂ. ಇದ್ದದ್ದು ಈಗ 40 ರೂ.ಗಳಾಗಿವೆ. ಗ್ರಾಹಕರು ಚೌಕಾಸಿಗೆ ಇಳಿಯುತ್ತಿದ್ದಾರೆ. ಬೇರೆ ದಿನಗಳಲ್ಲಿ 20 ರೂ.ಗೆ ಒಂದು ಕಾಯಿ ಖರೀದಿಸುತ್ತಿದ್ದವರು ಅನಿವಾರ್ಯವಾಗಿ ಹೆಚ್ಚು ಹಣ ನೀಡಬೇಕಿದೆ.
ಬೋಳುಗಾಯಿ ಕೆಜಿಗೆ 100 ರೂ.ಆಗಿದೆ. ಅಡುಗೆಗೆ ಬಳಸುವ ದೊಡ್ಡ ಕಾಯಿಗಳು 60 ರೂ. ದಾಟಿವೆ. ಜತೆಗೆ ಗುಣಮಟ್ಟದ ತೆಂಗಿನಕಾಯಿಗಳು ಸಿಗುತ್ತಿಲ್ಲ. ದೊಡ್ಡ ಅಂಗಡಿಗಳಲ್ಲಿ ಕಾಯಿ ಖರೀದಿಸಿ ತಂದು 1 ರೂ., 2 ರೂ. ಲಾಭ ಉಳಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ.
ಹೋಟೆಲ್ ಉದ್ಯಮಕ್ಕೂ ಪೆಟ್ಟು: ಹೋಟೆಲ್‌ಗಳಲ್ಲಿ ನಾನಾ ಆಹಾರ ತಯಾರಿಸಲು ತೆಂಗಿನಕಾಯಿ ಬೇಕು. ದರ ಏರಿಕೆಯಿಂದ ಹೋಟೆಲ್ ಉದ್ಯಮಕ್ಕೂ ಪೆಟ್ಟು ನೀಡಿದೆ. ತೆಂಗಿನಕಾಯಿ ದರ ಏರಿಕೆಯಿಂದ ಹೋಟೆಲ್‌ನ ಪದಾರ್ಥಗಳ ದರವೂ ಏರಿಕೆ ಮಾಡಲಾಗಿದೆ. ತೆಂಗಿನತುರಿ ಬದಲು ಶೇಂಗಾ ಬಳಕೆ ಮಾಡಬೇಕಾಗಿದೆ.
ತೆಂಗಿನಕಾಯಿ ದುಬಾರಿ ಆಗಿರುವುದರಿಂದ ಗ್ರಾಹಕರಿಗೆ ಹಾಗೂ ಸಣ್ಣಪುಟ್ಟ ವ್ಯಾಪಾಪಾರಸ್ಥರಿಗೆ ಹೊರೆಯಾಗಿದೆ. ಪ್ರತಿದಿನ ಸಾವಿರ ಕಾಯಿ ಮಾರುವವರು 400, 500 ಕಾಯಿಗಳನ್ನು ಮಾತ್ರ ಮಾರುತ್ತಿದ್ದೇವೆ. ಶ್ರಾವಣ ಮಾಸದಲ್ಲಿ ಬೇಡಿಕೆ ಹೆಚ್ಚಿದ್ದರೂ ಸರಿಯಾಗಿ ಪೂರೈಕೆ ಆಗುತ್ತಿಲ್ಲ.
ಮುತ್ತಣ್ಣ ಚಟ್ಟೇರ. ತೆಂಗಿನಕಾಯಿ ವ್ಯಾಪಾರಸ್ಥರು ಗಜೇಂದ್ರಗಡ