

ಹುಬ್ಬಳ್ಳಿ: ಮಠಗಳು ಉಳಿಯಬೇಕಾದರೆ ಹಿಂದು ಧರ್ಮದ ಎಲ್ಲ ಸಮಾಜದ ಭಕ್ತರು ಒಂದಾಗುವ ಅವಶ್ಯಕತೆ ಇದೆ ಎಂದು ಶಿರಹಟ್ಟಿ ಸಂಸ್ಥಾನಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ನಗರದ ವೀರಾಪುರಓಣಿಯ ಎರಡೆತ್ತಿನಮಠದಲ್ಲಿ ಆಯೋಜಿಸಿದ್ದ ಶ್ರಾವಣ ಮಾಸದ ಪುರಾಣ ಪ್ರವಚನ ಮಂಗಲೋತ್ಸವ ಹಾಗೂ ಲಿಂಗಾಯತ ಮತೋತ್ಪತ್ತಿ ನಿರ್ಣಯ ಗ್ರಂಥ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಈ ಹಿಂದೆ 63 ಮಠಗಳಿದ್ದವು. ಲಿಂಗಾಯಿತರ ಅಭಿಮಾನ ಶೂನ್ಯತೆಯಿಂದ ಮಠಗಳು ನಶಿಸಿ ಹೋಗಿವೆ. ಮಠಗಳ ಆಸ್ತಿಗಳು ಪ್ರಭಾವಿಗಳ ಪಾಲಾಗಿವೆ ಎಂದರು.
ಇಂದು ಲಿಂಗಾಯಿತರ ಕೊರಳಲ್ಲಿ ಲಿಂಗ ಇದೆ ಎಂದರೆ ಅದಕ್ಕೆ ಹಾನಗಲ್ನ ಶ್ರೀ ಕುಮಾರೇಶ್ವರ ಸ್ವಾಮೀಜಿಯವರು ಕಾರಣ. ಇದಕ್ಕೆ ಶ್ರೀ ಕುಮಾರೇಶ್ವರರಿಗೆ ಲಿಂ. ಶ್ರೀ ಚನ್ನವೀರ ಸ್ವಾಮೀಜಿಯವರು ಪ್ರೇರಣೆಯಾಗಿದ್ದರು ಎಂದು ಹೇಳಿದರು.
ಹಂದಿಗುಂದದ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ತೇರನ್ನು ಎಲ್ಲರೂ ಸೇರಿ ಎಳೆಯಬೇಕು. ಮಠಗಳು ಸಮಾಜವನ್ನು ಸಂಘಟಿಸಿ ಧಾರ್ವಿುಕ ಕಾರ್ಯವನ್ನು ಮಾಡುತ್ತವೆ. ಸಮಾಜಕ್ಕೆ ಒಳಿತನ್ನು ಮಾಡುವವರು ಮಠಾಧೀಶರು ಎಂಬುದನ್ನು ಭಕ್ತರು ಮರೆಯಬಾರದು ಎಂದರು.
ಹುಬ್ಬಳ್ಳಿ ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಕೂಡಲದ ಶ್ರೀ ಮಹೇಶ್ವರ ಶಿವಾಚಾರ್ಯರು, ಶ್ರೀ ನಂಜೇಶ್ವರ ಶಿವಾಚಾರ್ಯರು, ಎರಡೆತ್ತಿನಮಠ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಕಾಶ ಬೆಂಡಿಗೇರಿ, ಪಾಲಿಕೆ ಸದಸ್ಯ ನಿರಂಜನ ಹಿರೇಮಠ, ವಿರುಪಾಕ್ಷಪ್ಪ ಹರ್ಲಾಪುರ, ಶಂಕರಣ್ಣ ಬಿಜವಾಡ, ಇತರರು ಇದ್ದರು. ಪ್ರೊ. ಕೆ.ಎಸ್. ಕೌಜಲಗಿ ಪ್ರಾಸ್ತಾವಿಕ ಮಾತನಾಡಿದರು.