ರಾಘವೇಂದ್ರ ಸ್ವಾಮಿಗಳ ಅದ್ದೂರಿ ಪೂರ್ವರಾಧನೆ

dj hsd ragvendra
Published on

ಹೊಸದುರ್ಗ: ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಭಕ್ತರು ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ಮೂರು ದಿನಗಳ ಕಾಲ ನಡೆಯಲಿರುವ ಆರಾಧನಾ ಮಹೋತ್ಸವಕ್ಕೆ ಮಂಗಳವಾರ ಬೆಳಗ್ಗೆ ಚಾಲನೆ ನೀಡಲಾಯಿತು. ಪೂರ್ವಾರಾಧನೆ ಅಂಗವಾಗಿ ರಾಘವೇಂದ್ರ ಸ್ವಾಮಿಗಳ ಮೂಲ ಮೃತ್ತಿಕಾ ಬೃಂದಾವನ ಹಾಗೂ ಆಂಜನೇಯ ಸ್ವಾಮಿಯ ಮೂಲ ವಿಗ್ರಹಕ್ಕೆ ಬೆಳಗ್ಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು.

ಮೃತಿಕಾ ಬೃಂದಾವನಕ್ಕೆ ಮಧ್ಯಾಹ್ನ ಮಹಾ ನೈವೇದ್ಯ, ಹಸ್ತೋದಕ ಹಾಗೂ ಅಲಂಕಾರ ಸೇವೆಗಳು ಸೇರಿ ವಿವಿಧ ಪೂಜಾ ಕಾರ್ಯಗಳು ನಡೆದವು.

ಸಂಜೆ ಅಷ್ಟಾವಧಾನ, ಪ್ರಾಕಾರೋತ್ಸವ ಹಾಗೂ ಮಹಾಮಂಗಳಾರತಿ ಸೇವೆಗಳು ನಡೆಯಿತು. ದೇವಾಲಯಕ್ಕೆ ಭೇಟಿ ನೀಡಿದ ಭಕ್ತರಿಗೆ ಸರದಿ ಸಾಲಿನಲ್ಲಿ ರಾಯರ ಬೃಂದಾವನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಿರಂತರ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ದೇವಾಲಯವನ್ನು ಸಂಪೂರ್ಣವಾಗಿ ವಿವಿಧ ಹೂಮಾಲೆಗಳಿಂದ ಅಲಂಕರಿಸಲಾಗಿತ್ತು. ಬುಧವಾರ ಮಧ್ಯಾರಾಧನೆ ಹಾಗೂ ಗುರುವಾರ ಉತ್ತರಾಧನೆ ನಡೆಯಲಿವೆ.

ನಿತ್ಯ ಪಂಚಾಮೃತ ಅಭಿಷೇಕ, ಮಹಾಪೂಜೆ, ವಿವಿಧ ಅಲಂಕಾರ ಪೂಜೆಗಳು, ಅನ್ನ ಸಂತರ್ಪಣೆ ಹಾಗೂ ಸಂಜೆ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ದೇವಾಲಯದ ಧರ್ಮದರ್ಶಿಗಳಾದ ಮಂಜುನಾಥ್ ದಿವಾಕರ್, ಗೋಪಾಲ್ ಲಾಡ್, ನೀಲಕಂಠಯ್ಯ, ಮಾರುತಿ ರೇವಣ್ಕರ್, ಶ್ರೀನಿವಾಸ್, ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net