ಭಕ್ತರ ಕೈಹಿಡಿದ ಶ್ರೀ ನರೇಗಲ್ ದುರುಗಮ್ಮ

3 hbh 03
ಶ್ರೀ ನರೆಗಲ್ ದುರುಗಮ್ಮ ದೇವಿ ಮೂರ್ತಿ.
Published on

ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರದ ಏರಿಯಾದ ರೈತರ ಓಣಿಯ ಶ್ರೀನರೇಗಲ್ ದುರುಗಮ್ಮ ದೇವಿಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಇಂದು ಜರುಗಲಿದೆ.

ತುಂಗಭದ್ರಾ ಜಲಾಶಯ ನಿರ್ಮಾಣದ ವೇಳೆ ಹಿನ್ನೀರಿನಲ್ಲಿ ಮುಳುಗಡೆಯಾದ ಗ್ರಾಮಗಳಲ್ಲಿ ನಾರಾಯಣ ದೇವರ ಕೆರೆಯೂ ಒಂದಾಗಿತ್ತು. ಈ ಗ್ರಾಮದಲ್ಲಿ ಹತ್ತಾರು ದೇಗುಲಗಳು ಇದ್ದವು. ಮುಳುಗಡೆ ಹಿನ್ನೆಲೆಯಲ್ಲಿ ಗ್ರಾಮವು ಚದುರಿಹೋಗಿ ಪಟ್ಟಣದ ರಾಮನಗರ ಏರಿಯಾಕ್ಕೆ ಬಂದು ನಾಣಿಕೆರೆ ದೈವಸ್ಥರಾಗಿ ನೆಲೆಸಿದರು. ಇದರೊಂದಿಗೆ ಮರಿಯಮ್ಮನಹಳ್ಳಿ ಸೇರಿ ನಾಲ್ಕಾರು ಗ್ರಾಮಗಳು ನಿರ್ಮಾಣವಾದವು.

ಮರಿಯಮ್ಮನಹಳ್ಳಿಗೆ ಹೋದವರು ಲಕ್ಷ್ಮೀ ನಾರಾಯಣ ಹಾಗೂ ಆಂಜನೇಯ ಸ್ವಾಮಿಯನ್ನು ತೆಗೆದುಕೊಂಡು ಹೋಗಿ ಪ್ರತಿಷ್ಠಾಪಿಸಿದರು. ಲೋಕಪ್ಪನ ಹೊಲದಲ್ಲಿ ಗುಳೇಲೆಕ್ಕಮ್ಮ, ಗ್ರಾಮದೇವತೆ ಊರಮ್ಮ ಸ್ಥಾಪಿಸಿದರೆ, ಲಡಕನಬಾವಿ ದೈವಸ್ಥರು ಆಂಜನೇಯ ಸ್ವಾಮಿ, ರಾಮನಗರಕ್ಕೆ ಬಂದವರು ಈ ನರೇಗಲ್ ದುರುಗಮ್ಮ ದೇವಿಯನ್ನು ಕರೆತಂದರು. ಈ ತಾಯಿ ಕಿನ್ನಾಳ ಹತ್ತಿರದಲ್ಲಿರುವ ನರೇಗಲ್ ಶ್ರೀದೇವಿ ದುರುಗಮ್ಮ ಎಂತಲೂ ಪ್ರತೀತಿ ಇದ್ದು, ಹ.ಬೊ.ಹಳ್ಳಿ ತಾಲೂಕಿನ ಹಂಪಾಪಟ್ಟಣದಲ್ಲೂ ನರೇಗಲ್ ದುರುಗಮ್ಮ ನೆಲೆಸಿದ್ದಾಳೆ ಎಂತಲೂ ಹೇಳಲಾಗುತ್ತಿದೆ.

ಅಂದಿನ ದೈವಸ್ಥರಾದ ಸ್ವಾತಂತ್ರ್ಯ ಹೋರಾಟಗಾರರಾದ ಬಾರಿಕರ ಯಲ್ಲಪ್ಪ, ಸರ್ದಾರ ದುರುಗಪ್ಪ, ಅಗಸರ ಪಕ್ಕೀರಪ್ಪ, ಅಗಸರ ಸೋಮಪ್ಪ, ಬಾರಿಕರ ಮೈಲಾರಪ್ಪ ಇನ್ನೂ ಅನೇಕರು ಸೇರಿ ಈ ದುರುಗಮ್ಮಗೆ ದೇವಿಯ ಕಟ್ಟಿಗೆಯ ಮೂರ್ತಿ ಪ್ರತಿಷ್ಠಾಪಿಸಿ ಪ್ರಾಣ ಪ್ರತಿಷ್ಠಾಪನೆ ಮಾಡಿದರು.

ವರ್ಷಕ್ಕೊಮ್ಮೆ ನಡೆಯುವ ಈ ದೇವಿಯ ಹಬ್ಬದಲ್ಲಿ ಹೋಳಿಗೆ ನೈವೇದ್ಯಮಾಡಲಾಗುತ್ತದೆ. ರಾಮನಗರದ ಏರಿಯಾದ ಪ್ರತಿಯೊಂದು ಜನಾಂಗದವರು ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ವರ್ಷಕ್ಕೊಮ್ಮೆ ಹೊಳೆಗೆ ಹೋಗುವ ಪದ್ಧತಿ ಇದ್ದು, ಬಂದ ನಂತರ ರೈತರ ಓಣಿಯಲ್ಲೆಲ್ಲ ಪಂಜಿನ ಮೆರೆವಣಿಗೆ, ನಂತರ ಮನೆಮನೆಯಿಂದಲೂ ತಾಯಿಯ ಉಡಿತುಂಬಿ ಆಶೀರ್ವಾದ ಪಡೆಯುವ ಕಾರ್ಯಕ್ರಮ ಜರುಗುತ್ತದೆ.

ಶುಭ ಕಾರ್ಯಕ್ಕೆ ಮುನ್ನ ಪೂಜೆ ನರೇಗಲ್ ದುರುಗಮ್ಮನಂಬಿದ ಭಕ್ತರನ್ನು ಕೈಹಿಡಿದು ಕಾಪಾಡಿದ ಉದಾಹರಣೆ ಸಾಕಷ್ಟು ಇವೆ. ರಾಮನಗರ ಏರಿಯಾದ ಜನರು, ಕೃಷಿ ಭೂಮಿಯಲ್ಲಿ ಬಿತ್ತನೆ ಕಾರ್ಯಕ್ಕೂ ಮುನ್ನ ಪೂಜೆ ಪುನಸ್ಕಾರ ಮಾಡುತ್ತಾರೆ. ಯಾರೇ ವ್ಯವಹಾರಿಕವಾಗಿ ಹೊರಟರೂ ತಾಯಿಯ ದರ್ಶನದ ಬಳಿಕವೇ ಊರು ಬಿಡುವುದು ವಾಡಿಕೆಯಾಗಿದೆ. ಒಟ್ಟಾರೆ ತಾಯಿ ತನ್ನ ಒಡಲೊಳಗೆ ಬಂದವರ ನೆರವಿಗೆ ನಿಲ್ಲುವ ಆರಾಧ್ಯ ದೈವವಾಗಿದ್ದಾಳೆ. ನಾಣಿಕೆರೆಯವರಾಗಿದ್ದ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ ಕುಟುಂಬಕ್ಕೂ ಈ ರೈತರ ಓಣಿಯ ಜನರಿಗೂ ಅವಿನಾಭಾವ ಸಂಬಂಧವಿತ್ತು. ಎಂ.ಪಿ.ಪ್ರಕಾಶ್ ಅವರು ಮುಜರಾಯಿ ಮಂತ್ರಿಯಾಗಿದ್ದಾಗ 2ಲಕ್ಷ ರೂ.ಗಳ ಅನುದಾನ ನೀಡಿದ್ದರಿಂದ ಹಾಗೂ ದೈವಸ್ಥರ ಕೃಪೆಯಿಂದ ಸುಂದರ ದೇಗುಲ ನಿರ್ಮಾಣಗೊಂಡಿದೆ ಎಂದು ಶ್ರೀ ದೇವಿ ಸೇವಾ ಸಮಿತಿಯ ಪ್ರಮುಖ ಬಾಪೂಜಿ ಹೇಳುತ್ತಾರೆ.

ರಾಮನಗರ ಏರಿಯಾದ ಗ್ರಾಮದೇವತೆ, ಆರಾಧ್ಯ ದೇವರು ಎಂದರೆ ನರೇಗಲ್ ಶ್ರೀದುರುಗಮ್ಮ, ಭಕ್ತಿಗೆ ಒಲಿಯುವ ಶ್ರೀದುರುಗಮ್ಮ ಬೇಡಿದನ್ನು ನೆರವೇರಿಸುತ್ತಾಳೆ. ನಮ್ಮ ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿದ್ದೇವೆ. ಕಾಲಕಾಲಕ್ಕೆ ಮಳೆ, ಬೆಳೆಯಾಗುತ್ತಿದ್ದು ತಾಯಿ ನರೇಗಲ್ ದುರುಗಮ್ಮ ಮಹಿಮೆಯಾಗಿದೆ. ಹುಳ್ಳಿ ಮಂಜುನಾಥ ಪುರಸಭೆ ಮಾಜಿ ಉಪಾಧ್ಯಕ್ಷರು. ಹಗರಿಬೊಮ್ಮನಹಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net