ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡು

ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದ ಮಹಿಳಾ ಸಂಘದ ಸದಸ್ಯರು ಗುರುವಾರ ಹನೂರಿನ ಮೂಲಕ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿರುವುದು.
ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದ ಮಹಿಳಾ ಸಂಘದ ಸದಸ್ಯರು ಗುರುವಾರ ಹನೂರಿನ ಮೂಲಕ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿರುವುದು.
Published on

ಹನೂರು: ಸಾರಿಗೆ ವ್ಯವಸ್ಥೆಯೇ ಇಲ್ಲದ ಅಂದಿನ ಕಾಲಘಟ್ಟದಲ್ಲಿ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತರಿಂದ ಆರಂಭವಾದ ಕಾಲ್ನಡಿಗೆಯ ಪರುಸೆ (ಭಕ್ತಗಣ) ಪ್ರಸ್ತುತ ಸಮಾರೋಪಾದಿಯಲ್ಲಿ ಸಾಗುತ್ತಿದ್ದು, ಇದೀಗ ಮ.ಬೆಟ್ಟದಲ್ಲಿ ನಡೆಯುವ ದೀಪಾವಳಿ ಜಾತ್ರೆಗೆ ಸಾವಿರಾರು ಭಕ್ತರು ತೆರಳುತ್ತಿರುವುದೇ ಸಾಕ್ಷಿಯಾಗಿದೆ.

ಕಾಲ ಬದಲಾದರೂ ಬದಲಾಗದ ಸಂಪ್ರದಾಯ: ಯಾವುದೇ ಮೂಲ ಸೌಕರ್ಯ ಇಲ್ಲದ ಆ ಕಾಲದಲ್ಲಿ ಮಾರ್ಗದಲ್ಲಿ ಸಿಗುವ ಕೆರೆ, ಕುಂಟೆ ಹಾಗೂ ಅರಣ್ಯ ಪ್ರದೇಶದ ಝರಿಗಳ ನೀರನ್ನೇ ಕುಡಿದು ಕಾಲ್ನಡಿಗೆ ಭಕ್ತರು ದಣಿವಾರಿಸಿಕೊಳ್ಳುತ್ತಿದ್ದರು. ಮಾದಪ್ಪನು ಸಂಚರಿಸಿದ ದಾರಿಯಲ್ಲಿ ನಡೆದು ಹೋಗುವುದೇ ನಮ್ಮ ಭಾಗ್ಯ ಎಂದು ನಂಬಿ ಪಾದರಕ್ಷೆಯನ್ನು ಧರಿಸದೆ ಭಕ್ತಿಭಾವದಿಂದ ಮಾದಪ್ಪನ ಮಹಿಮೆಯ ಹಾಡುಗಳನ್ನು ಹೇಳುತ್ತ ಗುಂಪು ಗುಂಪಾಗಿ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದರು. ಮ.ಬೆಟ್ಟದಲ್ಲಿ ನಾಲ್ಕೈದು ದಿನಗಳ ಕಾಲ ಬೀಡು ಬಿಟ್ಟು ದೇವರ ದರ್ಶನ ಪಡೆದು ಪೂಜೆ ಸಲ್ಲಿಸುತ್ತಿದ್ದರು. ಎಲ್ಲರೂ ಒಟ್ಟುಗೂಡಿ ಪರುಸೇವೆಯನ್ನು (ಪಂಕ್ತಿಸೇವೆ) ನೆರವೇರಿಸುತ್ತಿದ್ದರು. ಬಳಿಕ ಕಾಲ್ನಡಿಗೆ ಮೂಲಕವೇ ಊರುಗಳಿಗೆ ವಾಪಸ್ಸಾಗುತ್ತಿದ್ದರು.

ಕಾಲ ಬದಲಾದಂತೆ ಎತ್ತಿನಗಾಡಿ, ಸೈಕಲ್, ಲಾರಿ ಹಾಗೂ ಇತ್ತೀಚೆಗೆ ಬೈಕ್, ಕಾರು, ಬಸ್ಸು ಹಾಗೂ ಇತರ ವಾಹನಗಳ ಮೂಲಕ ಭಕ್ತರು ಮ.ಬೆಟ್ಟಕ್ಕೆ ತೆರಳುತ್ತಿದ್ದಾರೆ. ಆದರೂ ಕೈಗೊಳ್ಳುತ್ತಿದ್ದ ಪಾದಯಾತ್ರೆಯ ಹಿಂದಿನ ಸಂಪ್ರದಾಯವನ್ನು ಮಾದಪ್ಪನ ಭಕ್ತರು ಬಿಟ್ಟಿಲ್ಲ. ಇದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, ವಿವಿಧ ಜಾತ್ರಾ ವೇಳೆ ಚಾ.ನಗರ ಸೇರಿದಂತೆ ಬೆಂಗಳೂರು, ಕನಕಪುರ, ರಾಮನಗರ, ಮಂಡ್ಯ, ಮೈಸೂರು ಸೇರಿದಂತೆ ಇನ್ನಿತರೆ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಕಾಲ್ನಡಿಗೆಯ ಮೂಲಕವೇ ತೆರಳುವುದನ್ನು ರೂಢಿಸಿಕೊಂಡು ಬಂದಿದ್ದಾರೆ. ಈ ದಿಸೆಯಲ್ಲಿ ಇದೀಗ ಮ.ಬೆಟ್ಟದಲ್ಲಿ ನಡೆಯುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಕಳೆದ ವಾರದಿಂದಲೂ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಕಾಲ್ನಡಿಗೆಯ ಮೂಲಕ ಸಮಾರೋಪಾದಿಯಲ್ಲಿ ಹನೂರು ಮಾರ್ಗವಾಗಿ ಸಂಚರಿಸುತ್ತಿದ್ದಾರೆ. ಮಾದಪ್ಪನ ಹಾಡಿನ ಜತೆಗೆ ವಾದ್ಯಮೇಳ, ಸತ್ತಿಗೆ ಸೂರಿಪಾನಿ ಹಾಗೂ ತಮಟೆಯ ಸದ್ದಿಗೆ ಭಕ್ತರು ಕುಣಿದು ಕುಪ್ಪಳಿಸುತ್ತಾ ಉತ್ಸಾಹದಿಂದ ತೆರಳುತ್ತಿದ್ದಾರೆ. ಹಾಗಾಗಿ ಹನೂರು ಭಾಗದಲ್ಲಿ ದೀಪಾವಳಿ ಜಾತ್ರೆಯ ಸಂಭ್ರಮ ಮನೆ ಮಾಡಿದೆ.

ತಾಳುಬೆಟ್ಟದಲ್ಲಿ ತಂಗುವುದು ವಾಡಿಕೆ: ಉತ್ತರದಿಂದ ನಡುಮಲೆಗೆ ಆಗಮಿಸಿದ ಶ್ರೀ ಮಹದೇಶ್ವರರು ಕಾಡು ಮೇಡುಗಳಲ್ಲಿ ಸಂಚರಿಸುತ್ತ ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಬೆಟ್ಟ ಗುಡ್ಡಗಳಿಂದ ಆವೃತವಾಗಿದ್ದ ತಾಳುಬೆಟ್ಟದಲ್ಲಿ ತಂಗಿ ವಿಶ್ರಾಂತಿ ಪಡೆದು ನಡುಮಲೆಗೆ ಪಯಣವನ್ನು ಆರಂಭಿಸಿದರು ಎನ್ನಲಾಗಿದೆ. ಈ ಕಾರಣದಿಂದ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರು ತಾಳುಬೆಟ್ಟದಲ್ಲಿ ತಂಗುತ್ತಾರೆ. ಬೆಳಗ್ಗೆ ಮಾದಪ್ಪನಿಗೆ ಧೂಪ ಹಾಕಿ, ಕೈ ಮುಗಿದು ಮ.ಬೆಟ್ಟಕ್ಕೆ ಪಯಣ ಬೆಳೆಸುವುದನ್ನು ಇಂದಿಗೂ ರೂಢಿಸಿಕೊಂಡು ಬಂದಿದ್ದಾರೆ.

ಹೆಚ್ಚಾದ ಕಾಲ್ನಡಿಗೆ ಭಕ್ತರ ಸಂಖ್ಯೆ: ಮ.ಬೆಟ್ಟದಲ್ಲಿ 5 ದಿನಗಳ ಕಾಲ ನಡೆಯುವ ದೀಪಾವಳಿ ಜಾತ್ರೆಗೆ ಪ್ರತಿ ವರ್ಷ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಕಾಲ್ನಡಿಗೆ ಮೂಲಕ ಮ.ಬೆಟ್ಟಕ್ಕೆ ಆಗಮಿಸಿ ಅಲ್ಲಿಯೇ ನಾಲ್ಕೈದು ದಿನಗಳ ಕಾಲ ವಾಸ್ತವ್ಯ ಹೂಡುತ್ತಾರೆ. ಈ ವೇಳೆ ಪಂಕ್ತಿಸೇವೆ ನೆರವೇರಿಸುತ್ತಾರೆ. ಜತೆಗೆ ವಿವಿಧ ಉತ್ಸವಗಳು, ಸೇವೆಗಳು ಹಾಗೂ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆಯುತ್ತಾರೆ.

ಜಾತ್ರೆಗೆ ನಾಲ್ಕೈದು ದಿನಗಳು ಬಾಕಿ ಇರುವಾಗ ಮಾತ್ರ ಭಕ್ತರು ಈ ಹಿಂದೆ ಪಾದಯಾತ್ರೆ ಕೈಗೊಂಡು ಜಾತ್ರಾ ಸಮಯದಲ್ಲಿ ಮ.ಬೆಟ್ಟದಲ್ಲೇ ತಂಗುತ್ತಿದ್ದರು. ಆದರೆ ಈ ವರ್ಷ ಹೆಚ್ಚು ಜನಸಂದಣಿಯಾಗುವ ಹಿನ್ನೆಲೆಯಲ್ಲಿ ಜಾತ್ರೆ ಆರಂಭವಾಗುವ 15 ದಿನಕ್ಕೂ ಮುನ್ನವೇ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ತೆರಳಿ ದೇವರ ದರ್ಶನ ಪಡೆದು ಗ್ರಾಮಗಳಿಗೆ ಹಿಂದಿರುಗಿದ್ದಾರೆ. ಆದಾಗ್ಯೂ ಕಳೆದ ಒಂದು ವಾರದಿಂದಲೂ ಕೊಳ್ಳೇಗಾಲ -ಹನೂರು ಮಾರ್ಗವಾಗಿ ಪಾದಯಾತ್ರಿಗಳು ನಿರಂತರವಾಗಿ ಮ.ಬೆಟ್ಟಕ್ಕೆ ತೆರಳುತ್ತಿದ್ದು, ಇದೀಗ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ತಾಳುಬೆಟ್ಟದಲ್ಲಿ ತಂಗಿ ಮಾದಪ್ಪನ ಸನ್ನಿಧಿಯಲ್ಲಿ ಬೀಡು ಬಿಡುತ್ತಿದ್ದಾರೆ. ಇದರಿಂದ ಶ್ರೀ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಮನೆ ಮಾಡಿದ ಸಂಭ್ರಮ: ಜಾತ್ರೆ ಅಂಗವಾಗಿ ಮ.ಬೆಟ್ಟದಲ್ಲಿ ಜರುಗುವ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲು ಸಾವಿರಾರು ಭಕ್ತರು ಮ.ಬೆಟ್ಟಕ್ಕೆ ಕಾಲ್ನಡಿಗೆಯ ಮೂಲಕ ತೆರಳುತ್ತಿದ್ದು, ಕಳೆದ ವಾರದಿಂದ ಚಾಮರಾಜನಗರ ಸೇರಿದಂತೆ ನರಸೀಪುರ, ನಂಜನಗೂಡು, ಮೈಸೂರು, ರಾಮನಗರ, ಮಳವಳ್ಳಿ ಕಡೆಗಳಿಂದ ಕಾಲ್ನಡಿಗೆಯ ಮೂಲಕ ತೆರಳುವ ಭಕ್ತರ ಸಂಖ್ಯೆ ಹೆಚ್ಚಿದೆ. ಹಗಲು-ರಾತ್ರಿ ಎನ್ನದೆ ತಂಡೋಪತಂಡವಾಗಿ ಜನರು ತೆರಳುತ್ತಿದ್ದಾರೆ. ಈ ಬಾರಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮಾದಪ್ಪನ ಹಾಡನ್ನು ಹಾಡುತ್ತಾ ತಮಟೆಯ ತಾಳಕ್ಕೆ ಕುಣಿದು ಕುಪ್ಪಳಿಸುತ್ತಾ ತೆರಳುತ್ತಿದ್ದರೆ, ಮಾದಪ್ಪನ ದೇವರ ಗುಡ್ಡರು ಕಂಸಾಳೆ ಬಾರಿಸುತ್ತ ಮಾದಪ್ಪನ ಹಾಡನ್ನು ಹಾಡುತ್ತ ಮ.ಬೆಟ್ಟಕ್ಕೆ ಪಯಣ ಬೆಳೆಸಿದ್ದಾರೆ. ಹಾಗಾಗಿ ಹನೂರು ಭಾಗದಲ್ಲಿ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net