

ಹುಬ್ಬಳ್ಳಿ: ಶ್ರೀಮಠದ ಅಭಿವೃದ್ಧಿಗೆ ಮಾಸ್ಟರ್ ಪ್ಲಾೃನ್, ವೈದಿಕ ಸಂಪ್ರಾದಯಕ್ಕೆ ವಿಮುಕ್ತಿ, ಸರಿಯಾದ ಲೆಕ್ಕ ಪತ್ರ ಸಂಗ್ರಹ, ಭಕ್ತರೊಂದಿಗೆ ನಡೆದುಕೊಳ್ಳುವ ರೀತಿ ಸೇರಿ ವಿವಿಧ ಸಲಹೆ-ಸೂಚನೆಗಳನ್ನು ಇಲ್ಲಿಯ ಶ್ರೀ ಸಿದ್ಧಾರೂಢ ಮಠದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ಏರ್ಪಡಿಸಿದ್ದ ಪೋಷಕರು, ಆಶ್ರಯದಾತರು, ಆಜೀವ ಸದಸ್ಯರ ಸಭೆಯಲ್ಲಿ ಭಕ್ತರು ನೀಡಿದರು.
ಶ್ರೀಮಠದ ಇನ್ನಷ್ಟು ಅಭಿವೃದ್ಧಿ ಕಾಣಬೇಕು. ಅದೈತ ಸಿದ್ಧಾಂತ ನೆಚ್ಚಿರುವ ಮಠದಲ್ಲಿ ವೈದಿಕ ಸಂಪ್ರದಾಯ ಬಿಡಬೇಕು. ಶ್ರೀಮಠದ ಅಭಿವೃದ್ಧಿಗೆ ಅಗತ್ಯ ಮಾಸ್ಟರ್ ಪ್ಲಾೃನ್ ಸಿದ್ಧಪಡಿಸಬೇಕು. ತುಲಾಭಾರ ಸೇವೆ ಸಂದರ್ಭದಲ್ಲಿ ಶ್ರೀಸಿದ್ಧಾರೂಢ ಅಜ್ಜನವರ ಮೂರ್ತಿ ತಕ್ಕಡಿಯಲ್ಲಿ ಇಡುವುದನ್ನು ಕೈಬಿಡಬೇಕು ಎಂದು ಗುರುನಾಥ ಉಳ್ಳಿಕಾಶಿ ಹೇಳಿದರು.
ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ಭಕ್ತರು ಕೊಟ್ಟ ಸಲಹೆ-ಮಾರ್ಗದರ್ಶನವನ್ನು ಟ್ರಸ್ಟಿಗಳು ಸ್ವೀಕರಿಸಬೇಕು. ಸಾತ್ವಿಕವಾಗಿ ಸಮಸ್ಯೆ ಬಗೆಹರಿಸಬೇಕು. ಉತ್ತರ ಕರ್ನಾಟಕದ ಬಹುದೊಡ್ಡ ಮಠ. ರಾಜ್ಯ ಸೇರಿ ಇತರ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಇದನ್ನು ತಾವು ಇನ್ನಷ್ಟು ಅಭಿವೃದ್ಧಿಗೊಳಿಸಬೇಕು ಎಂದು ಸಲಹೆ ನೀಡಿದರು.
ಗುರುಶಾಂತಪ್ಪ ಕ್ವಾರಿ ಮಾತನಾಡಿ, ಶ್ರೀಮಠದಲ್ಲಿ ನ್ಯಾಯಯುತವಾಗಿ ನಡೆದುಕೊಳ್ಳಬೇಕು. ಕಾನೂನು ಮುಂದೆ ಯಾರೂ ದೊಡ್ಡವರಲ್ಲ. ಎಲ್ಲವನ್ನೂ ಅಜ್ಜನವರು ನೋಡುತ್ತಿರುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು. ಭಕ್ತರಾದ ಶಿವಕುಮಾರ ಗೋಕಾವಿ, ಅಣ್ಣಪ್ಪ ತಳವಾರ, ರಂಗಾ ಬದ್ದಿ, ಎಚ್.ಎಸ್. ರೂಗಿ, ಶಿವಕುಮಾರ ಹಿರೇಮಠ, ಮಂಜುನಾಥ, ಸಂಜೀವ ಧುಮಕನಾಳ ಮಾತನಾಡಿ, ಭಕ್ತರ ಮೇಲೆ ಎಫ್‌ಐಆರ್ ದಾಖಲಿಸಬಾರದು. ಹೊಸ ಇತಿಹಾಸ ನಿರ್ಮಾಣ ಮಾಡುವಂಥ ಮಠವನ್ನು ಅಭಿವೃದ್ಧಿಪಡಿಸಬೇಕು. ಪಾರ್ಕಿಂಗ್‌ಗೆ ಸ್ಥಳಾವಕಾಶ ನಿಗದಿಪಡಿಬೇಕು. ಶ್ರೀಮಠಕ್ಕೆ ದಾನಿಗಳು ಕೊಟ್ಟ ಜಾಗ, ಜಮೀನು ಸೇರಿ ಇತರ ಸಾಮಗ್ರಿಗಳ ಲೆಕ್ಕಪತ್ರವನ್ನು ಚೊಕ್ಕಾಗಿ ಇಡಬೇಕು ಎಂದು ಸಾತ್ವಿಕ ಸಿಟ್ಟು ಹೊರಹಾಕಿದರು.
ಇದೆಲ್ಲವನ್ನೂ ಆಲಿಸಿ ಮಾತನಾಡಿದ ಮಾಜಿ ಶಾಸಕ, ಟ್ರಸ್ಟ್ ಮೇಲ್ಮನೆ ಸದಸ್ಯ ಡಿ.ಆರ್. ಪಾಟೀಲ, ಭಕ್ತರು ಕೊಟ್ಟ ಸಲಹೆ-ಸೂಚನೆಗಳನ್ನು ಮುಂದಿನ ಸಭೆಯಲ್ಲಿ ಸ್ವೀಕರಿಸಲಾಗುವುದು. ಭಕ್ತರು ಬದಲಾವಣೆ ಬಯಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಶ್ರೀಮಠದ ವಿಷಯ ಬಂದಾಗ ಸ್ವಲ್ಪ ನೋವಾಗುತ್ತದೆ. ನಾವೆಲ್ಲ ಶಾಶ್ವತ ಅಲ್ಲ. ಅಜ್ಜನವರೇ ಶಾಶ್ವತ. ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಯಾರೂ ಮಾಡಬಾರದು. ಅಂಕು-ಡೊಂಕುಗಳನ್ನು ತಿದ್ದಿಕೊಂಡು ಹೋಗಬೇಕು. ಗೌರವ ಕಡಿಮೆ ಮಾರಬಾರದು ಎಂದು ಸಲಹೆ ನೀಡಿದರು.
ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ್, ಟ್ರಸ್ಟಿಗಳಾದ ಶಾಮಾನಂದ ಪೂಜೇರಿ, ಸರ್ವಮಂಗಳಾ ಪಾಠಕ, ಉದಯಕುಮಾರ ನಾಯ್ಕ, ಬಾಳು ಮಗಜಿಕೊಂಡಿ, ಚನ್ನವೀರ ಮುಂಗುರವಾಡಿ, ವ್ಯವಸ್ಥಾಪಕ ಈರಣ್ಣ ತುಪ್ಪದ ಇತರರು ಉಪಸ್ಥಿತರಿದ್ದರು.