

ನರೇಗಲ್ಲ: ಜಗತ್ತಿನಲ್ಲಿ ಎಲ್ಲ ವಿಷಯಗಳಲ್ಲಿ ಭಕ್ತಿಯೇ ದೊಡ್ಡದು. ಭಕ್ತರ ಭಕ್ತಿ ಭಗವಂತನನ್ನೂ ಕಟ್ಟಿ ಹಾಕುತ್ತದೆ ಎನ್ನುವುದಕ್ಕೆ ಇತಿಹಾಸದಲ್ಲಿ ನಮಗೆ ಅನೇಕ ಉದಾಹರಣೆಗಳು ಸಿಗುತ್ತವೆ. ನರೇಗಲ್ಲ ಭಕ್ತರ ಪ್ರೀತಿ, ಭಕ್ತಿಯನ್ನು ಅಳೆಯಲು ಸಾಧ್ಯವಿಲ್ಲ ಎಂದು ಹಂಪಸಾಗರದ ನವಲಿ ಕಟ್ಟಿಹಿರೇಮಠದ ರುದ್ರಮುನಿ ಶಿವಲಿಂಗ ಶಿವಾಚಾರ್ಯರು ಹೇಳಿದರು.
ನರೇಗಲ್ಲ ಪಟ್ಟಣದಲ್ಲಿನ ಶಾಖಾ ಮಠದಲ್ಲಿ ಮಂಗಳವಾರ ಬೆಳಗ್ಗೆ ಪಟ್ಟಣ ಮತ್ತು ಮಜಿರೆ ಗ್ರಾಮಗಳ ಭಕ್ತರನ್ನು ಹಂಪಸಾಗರದ ಜಾತ್ರಾ ಮಹೋತ್ಸವಕ್ಕೆ ಆಮಂತ್ರಿಸಿ ಆಶೀರ್ವಚನ ನೀಡಿದರು.
ಫೆ.16ರಂದು ಹಂಪಸಾಗರದಲ್ಲಿ ಮಹಾದೇವ ತಾತನವರ 67ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ನರೇಗಲ್ಲ ಮತ್ತು ಮಜಿರೆ ಗ್ರಾಮಗಳ ಎಲ್ಲ ಭಕ್ತರೂ ಮಹಾ ರಥೋತ್ಸವದಲ್ಲಿ ಪಾಲ್ಗೊಂಡು ತಾತನವರ ಕೃಪೆಗೆ ಪಾತ್ರರಾಗಬೇಕು. ಫೆ.10ರಿಂದ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಪ್ರತಿ ದಿನ ಸಾಯಂಕಾಲ 7ಕ್ಕೆ ವೇ. ಮೂ. ಕೇದಾರಸ್ವಾಮಿಗಳು ಹಗರಿಬೊಮ್ಮನಹಳ್ಳಿ ಇವರಿಂದ ಆಧಾತ್ಮಿಕ ಪ್ರವಚನ ಪ್ರಾರಂಭವಾಗುತ್ತದೆ ಎಂದರು.
14ರಂದು ತೇರಿನ ಕಳಸಾರೋಹಣ, 15ರಂದು ಜಂಗಮಾರಾಧನೆ,16ರಂದು ಮಹಾರಥೋತ್ಸವವು ಜರುಗಲಿದ್ದು ಎಲ್ಲ ಕಾರ್ಯಗಳಲ್ಲಿ ಭಕ್ತರು ಪಾಲ್ಗೊಳ್ಳಬೇಕು ಎಂದ ಶ್ರೀಗಳು ಭಕ್ತರನ್ನು ಜಾತ್ರೆಗೆ ಆಹ್ವಾನಿಸಿದರು.
ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿ, ಮಹಾಮಹಿಮರು ಹಂಪಸಾಗರದಲ್ಲಿ ನೆಲೆನಿಂತು ಭಕ್ತರನ್ನು ಉದ್ಧರಿಸುತ್ತಿರುವುದು ಮತ್ತು ಈಗ ಆ ಕಾರ್ಯವನ್ನು ಷ.ಬ್ರ.ಶ್ರೀ ರುದ್ರಮುನಿ ಶಿವಲಿಂಗ ಶಿವಾಚಾರ್ಯರು ಮುಂದುವರಿಸಿರುವುದು ಅತ್ಯಂತ ಮಹತ್ವದ್ದು ಮತ್ತು ವಿಶೇಷವಾಗಿದೆ ಎಂದರು.
ನಿವೃತ್ತ ಸೈನಿಕ ಶಿವಪುತ್ರಪ್ಪ ಸಂಗನಾಳ, ಮಲ್ಲನಗೌಡರ, ಎಸ್.ಎಚ್. ಭಜಂತ್ರಿ ಮಾತನಾಡಿದರು. ಮಹಾದೇವಸ್ವಾಮಿಗಳು, ಪಪಂ ಮಾಜಿ ಅಧ್ಯಕ್ಷ ಕಲ್ಮೇಶ ತೊಂಡಿಹಾಳ, ಶರಣಪ್ಪ ಕಲಾಲಬಂಡಿ, ವೀರಣ್ಣ ಗುಜಮಾಗಡಿ, ವಿಶ್ವಚೇತನ ಪ್ರೌಢಶಾಲೆಯ ಬಳಗ, ದೇವಪ್ಪ ಹಕ್ಕಿ,ಸ ಮೈಲಾರಪ್ಪ ಗೋಡಿ, ಗಂಗಾಧರ ಮಡಿವಾಳರ, ಭಾಷಾಸಾಬ್ ನದಾಫ್, ಮಂಜುನಾಥ ಪಾಯಪ್ಪಗೌಡ್ರ, ರುದ್ರಪ್ಪ ಬೆಳಗಗಲ್ಲ, ಶರಣಪ್ಪ ಮಾರನಬಸರಿ, ಇತರರಿದ್ದರು. ಮುತ್ತಣ್ಣ ಹಡಪದ ನಿರೂಪಿಸಿ, ವಂದಿಸಿದರು.