

ಮಹಾಶಿವರಾತ್ರಿ ಹಬ್ಬದ ಅಂಗವಾಗಿ ತಾಲೂಕಿನ ನಂದಿಯ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತ ಸಮೂಹವು, ಹದಗೆಟ್ಟ ರಸ್ತೆ ಮತ್ತು ಬೀದಿದೀಪ ಸೇರಿದಂತೆ ನಾನಾ ವ್ಯವಸ್ಥೆಗೆ ಆಕ್ರೋಶ ವ್ಯಕ್ತಪಡಿಸಿತು.
ನಂದಿ ಮಾರ್ಗದ ರಸ್ತೆಗಳಲ್ಲಿನ ದೊಡ್ಡ ಗುಂಡಿಗಳು, ಜಲ್ಲಿ ಕಲ್ಲುಗಳು, ಧೂಳು ಕಾಡಿದರೆ, ಬೆಳಗದ ಬೀದಿದೀಪಗಳಿಂದ ಕಗ್ಗತ್ತಲಿನಲ್ಲಿ ಸಾಗಬೇಕಾಯಿತು. ದೇವಾಲಯದ ಆವರಣ ಹೊರತುಪಡಿಸಿದರೆ ರಸ್ತೆ, ಚರಂಡಿ, ಬೀದಿದೀಪಗಳ ನಿರ್ವಹಣೆಯಲ್ಲಿ ಆಡಳಿತ ಯಂತ್ರಾಂಗ ಸಂಪೂರ್ಣ ವಿಲವಾಗಿದ್ದು ಭಕ್ತಾದಿಗಳು ಜಾತ್ರೆಗೆ ಬಂದು ಹೋಗುವ ಸಂದರ್ಭದಲ್ಲಿ ಸ್ಥಳಿಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಅಸಡ್ಡೆ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದರು. ಅಭಿವೃದ್ಧಿಯ ಜಪ ಬಿಟ್ಟರೆ ಕೆಲಸದಲ್ಲಿ ದೊಡ್ಡ ಸಾಧನೆ ಏನಿಲ್ಲ ಎಂದು ಟೀಕಿಸಿದರು.
*ಸಿದ್ಧತೆ, ವ್ಯವಸ್ಥೆ ಕಡೆಗಣನೆ
ಪ್ರತಿ ವರ್ಷ ಹಬ್ಬದ ಹಿನ್ನೆಲೆಯಲ್ಲಿ 15 ದಿನ ಮೊದಲೇ ರಸ್ತೆಗೆ ಡಾಂಬರು ಹಾಕಲಾಗುತ್ತಿತ್ತು. ಕೆಟ್ಟು ಹೋದ ಬೀದಿದೀಪಗಳ ದುರಸ್ತಿ ಸೇರಿದಂತೆ ಇತರ ಕೆಲಸವನ್ನು ನಿರ್ವಹಿಸಲಾಗುತ್ತಿತ್ತು. ಆದರೆ, ಈ ಬಾರಿ ಸಭೆಗಳಲ್ಲಿ ಚರ್ಚೆ, ಕೆಲಸದ ಕಡೆಗಣನೆಯು ಕಂಡು ಬಂದಿದೆ.
ಚಿಕ್ಕಬಳ್ಳಾಪುರ ನಗರದಿಂದ ನಂದಿ ಮಾರ್ಗದಲ್ಲಿ ಕಂದವಾರ ಕೆರೆ ಕಟ್ಟೆ ರಸ್ತೆ, ಜಡಲತಿಮ್ಮನಹಳ್ಳಿ ರಸ್ತೆ ಸೇರಿದಂತೆ ವಿವಿಧೆಡೆ ದೊಡ್ಡ ಗುಂಡಿಗಳಲ್ಲಿ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್, ಆಟೋ, ಕಾರು ಮತ್ತು ದ್ವಿಚಕ್ರ ವಾಹನಗಳು ಪರದಾಡಬೇಕಾಯಿತು. ಜನರಿಂದ ತುಂಬಿ ತುಳುಕಾಡುತ್ತಿದ್ದ ಭಾರಕ್ಕೆ ತಗ್ಗು ಜಾಗಗಳಲ್ಲಿ ವಾಲುತ್ತ ಸಾಗುತ್ತಿದ್ದ ದೃಶ್ಯ ಕಂಡು ಬಂತು. ಶಿವರಾತ್ರಿಗೆ ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬುಧವಾರ ಮಧ್ಯಾಹ್ನದಿಂದಲೇ ಆಗಮಿಸಿದ್ದು ಸಂಜೆಯಾಗುತ್ತಿದ್ದಂತೆ ಪ್ರಮುಖ ಮಾರ್ಗದ ರಸ್ತೆಗಳಲ್ಲಿ ಬೀದಿದೀಪದ ವ್ಯವಸ್ಥೆ ಇರಲಿಲ್ಲ. ಕಗ್ಗತ್ತಲಿನ ವಾತಾವರಣದಲ್ಲಿ ಪಾದಚಾರಿಗಳು ನಡೆದುಕೊಂಡು ಹೋಗಬೇಕಾಯಿತು.