

ಕೊಂಡ್ಲಹಳ್ಳಿ: ಇಲ್ಲಿನ ಬಿ.ಜಿ.ಕೆರೆಯಲ್ಲಿ ಬಸವೇಶ್ವರಸ್ವಾಮಿಯ ರಥೋತ್ಸವವು ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಉತ್ಸವದ ಅಂಗವಾಗಿ ಬೆಳಗ್ಗೆ ಸ್ವಾಮಿಯ ವಿಗ್ರಹಕ್ಕೆ ಪೂಜೆ, ಬಲಿ ಅನ್ನ, ಮಾಳೇಹಳ್ಳಿ ಭಕ್ತರಿಂದ ದೇವರಿಗೆ ಎಡೆ ಅರ್ಪಣೆ, ಇತರ ಧಾರ್ವಿುಕ ಕಾರ್ಯಗಳು ನಡೆದವು.
ಪಲ್ಲಕ್ಕಿಯಲ್ಲಿ ಆಗಮಿಸಿದ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ನಂತರ ರಥೋತ್ಸವ ಚಾಲನೆಗೊಂಡಿತು. ಭಾರಿ ಹೂವಿನ ಹಾರಗಳಿಂದ ರಥವನ್ನು ಅಲಂಕರಿಸಲಾಗಿತ್ತು. ಸ್ವಾಮಿಗೆ ಜೈಕಾರ ಕೂಗುತ್ತಾ ದೇವಾಲಯದ ಮುಂಭಾಗದಿಂದ ಪಾದಗಟ್ಟೆವರೆಗೆ ರಥವನ್ನು ಎಳೆದೊಯ್ಯಲಾಯಿತು.
ರಥದ ಮುಂದೆ ಸಾಗುತ್ತಿದ್ದ ಬಸವಣ್ಣನ ಗಾಂಭೀರ್ಯ ಭಕ್ತರಲ್ಲಿ ಭಕ್ತಿಭಾವ ಮೂಡಿಸಿತು. ಸೂರು ಬೆಲ್ಲ, ಬಾಳೆಹಣ್ಣುಗಳನ್ನು ತೇರಿಗೆ ಎಸೆದು, ಹಣ್ಣು ಕಾಯಿಗಳನ್ನು ಸಮರ್ಪಿಸುವ ಮೂಲಕ ಹರಕೆಗಳನ್ನು ಸಲ್ಲಿಸಲಾಯಿತು.
ಉತ್ಸವದಲ್ಲಿ ನಂದಿಕೋಲು, ಕರಡಿ ಮಜಲು, ಭಜನೆ ಇತರ ಜಾನಪದ ಕಲಾ ಪ್ರಕಾರಗಳು ಎಲ್ಲರ ಗಮನ ಗಮನ ಸೆಳೆದವು.ದೇವಾಲಯದ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಾಸಕ ಎನ್.ವೈ.ಗೋಪಾಲಕೃಷ್ಣ, ವೈನ್ ಬೋರ್ಡ್ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು, ಗ್ರಾಪಂ ಅಧ್ಯಕ್ಷ ಎಸ್.ಜಯಣ್ಣ ಇತರರಿದ್ದರು.
ವಿಷೇಶ ಉರುಳು ಸೇವೆ: ದೇವರ ಉತ್ಸವ ಮೂರ್ತಿ ದೇವಾಲಯಕ್ಕೆ ಪ್ರವೇಶಿಸುತ್ತಿದ್ದಂತೆ ಭಕ್ತರು ಉರುಳು ಸೇವೆಯಿಂದ ಹರಕೆ ಸಮರ್ಪಿಸಿದರು.
ಮುಕ್ತಿ ಬಾವುಟ: ಸ್ವಾಮಿಯ ತೇರಿನ ಮುಕ್ತಿ ಬಾವುಟವನ್ನು ಗ್ರಾಮದ ಚನ್ನಪ್ಪಾರು ಮಂಜಣ್ಣ ಒಂದು ಲಕ್ಷದ ಒಂದು ನೂರು ರೂ.ಗಳಿಗೆ ಪಡೆದರು. ಉತ್ಸವದಲ್ಲಿ ಮೊಳಕಾಲ್ಮುರು, ಕೋನಸಾಗರ, ಬೆಂಗಳೂರು, ಚಿತ್ರದುರ್ಗ, ಬಳ್ಳಾರಿ, ರಾಯದುರ್ಗ ಹಾಗೂ ನೆರೆಯ ಆಂಧ್ರ ಪ್ರದೇಶದಿಂದ ಭಕ್ತರು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
ಮೊಳಕಾಲ್ಮೂರು ಠಾಣೆಯ ಪಿಎಸ್ಐ ಜಿ.ಪಾಂಡುರಂಗಪ್ಪ, ಸಿಬ್ಬಂದಿ ಬಂದೋಬಸ್ತ್ ವಹಿಸಿದ್ದರು.