

ಬಂಟ್ವಾಳ: ಧರ್ಮ ಹಾಗೂ ಸಂಸ್ಕೃತಿ ಜತೆಗೆ ಸಾಗಬೇಕಾದರೆ ಸಂಸ್ಕಾರಬೇಕು. ಅದನ್ನು ಸಾಧಿಸಲು ಇರುವ ಸುಲಭದ ದಾರಿ ಭಜನೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಶ್ರೀ ಮೂಕಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರ ಬ್ರಹ್ಮರಕೂಟ್ಲು 53ನೇ ವರ್ಷದ ಏಕಹಾ ಭಜನಾ ಮಹೋತ್ಸವದ ಪ್ರಯುಕ್ತ ಸೋಮವಾರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ವೇದ, ಉಪನಿಷತ್ತಿನ ಸಾರವನ್ನು ಭಜನೆಯಿಂದ ತಿಳಿಯಲು ಸಾಧ್ಯವಿದೆ. ರಾಮನ ಆದರ್ಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಆಗ ಸಂಸ್ಕಾರ, ಸಂಸ್ಕೃತಿ ಉಳಿಯಲು ಸಾಧ್ಯವಿದೆ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ, ಸಮಾಜ ಸೇವಕ ನಾರಾಯಣ ಹೊಳ್ಳ ಹೊಳ್ಳರಬೈಲು ಗುತ್ತು ಮಾತನಾಡಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮನೋಜ್ ಕನಪಾಡಿ, ಸದಾಶಿವ ಡಿ.ತುಂಬೆ, ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ವಿಜೇತೆ ರಶ್ಮಿತಾ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವಿಶ್ವ ಹಿಂದು ಪರಿಷತ್ ವಿಭಾಗ ಪ್ರಚಾರ ಪ್ರಸಾರ ಪ್ರಮುಖ್ ಪ್ರದೀಪ್ ಸರಿಪಳ್ಳ, ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ, ಗ್ರಾಪಂ ಅಧ್ಯಕ್ಷ ಪುರುಷೋತ್ತಮ ಕೊಟ್ಟರಿ ಮಾಡಂಗೆ, ಗೌರವ ಸಲಹೆಗಾರ ಶಶಿಧರ ಬ್ರಹ್ಮರಕೂಟ್ಲು, ಉತ್ಸವ ಸಮಿತಿ ಅಧ್ಯಕ್ಷ ಕವಿರಾಜ್ ಚಂದ್ರಿಗೆ, ಮೂಕಾಂಬಿಕ ಮಾತೃ ಮಂಡಳಿ ಅಧ್ಯಕ್ಷೆ ಗೀತಾ ಆನಂದ ಉಪಸ್ಥಿತರಿದ್ದರು.
ಭಜನಾ ಮಂದಿರದ ಅಧ್ಯಕ್ಷ ನವೀನ್ ಬಂಗೇರ ಪಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಹೇಮಂತ್ ಸನಿಲ್ ಸ್ವಾಗತಿಸಿದರು. ಸಂದೇಶ್ ದರಿಬಾಗಿಲು ವಂದಿಸಿದರು. ಎಚ್.ಕೆ.ನಯನಾಡು ನಿರೂಪಿಸಿದರು.