

ಧಾರವಾಡ: ಯುವಜನತೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ತಮ್ಮ ಜೀವನ ಮಂತ್ರವನ್ನಾಗಿ ಮಾಡಿಕೊಂಡು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಹೇಳಿದರು.
ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದಿಂದ ಸಿ.ಬಿ.ನಗರದ ವೀರಶೈವ ಲಿಂಗಾಯತ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ `ಕರ್ನಾಟಕ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತಿನ 11ನೇ ವಾರ್ಷಿಕ ಸಮ್ಮೇಳನ'ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರಂತೆ ಪ್ರತಿಯೊಬ್ಬ ಯುವಕರು ಆತ್ಮವಿಶ್ವಾಸ, ತ್ಯಾಗ ಮತ್ತು ಸೇವಾ ಮನೋಭಾವ ಹೊಂದಿದ್ದರೆ ಮತ್ತು ಸಕಾರಾತ್ಮಕ ಕಾರ್ಯಗಳು, ನಾವೀನ್ಯತೆ ಮತ್ತು ರಾಷ್ಟ್ರೀಯ ಸೇವೆಗೆ ತಮ್ಮ ಶಕ್ತಿ ವಿನಿಯೋಗಿಸಿದರೆ ಭಾರತ ಮತ್ತೊಮ್ಮೆ ವಿಶ್ವಗುರು ಆಗಬಹುದು. ಆಧ್ಯಾತ್ಮಿಕತೆ, ಮಾನವೀಯ ಮೌಲ್ಯಗಳು ಭಾರತೀಯ ಸಂಸ್ಕೃತಿಯ ಅಡಿಪಾಯವಾಗಿವೆ. ಇದನ್ನು ಸಂತರು, ಋಷಿಗಳು, ಸನ್ಯಾಸಿಗಳು ತಮ್ಮ ತಪಸ್ಸು, ಜ್ಞಾನ ಮತ್ತು ಯೋಗಾಭ್ಯಾಸಗಳ ಮೂಲಕ ಬಲಪಡಿಸಿದರು. ಮಹರ್ಷಿಯು ಪತಂಜಲಿ ಯೋಗವನ್ನು ವೈಜ್ಞಾನಿಕವಾಗಿ ರೂಪಿಸಿ, ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಸಮತೋಲನಕ್ಕೆ ದಾರಿ ಮಾಡಿಕೊಟ್ಟರು. ಸಂತ ಕಬೀರ್, ಗುರುನಾನಕ್, ತುಳಸಿದಾಸರು, ಮೀರಾಬಾಯಿ, ಸಂತ ರವಿದಾಸರು ಮತ್ತು ಸಂತ ಬಸವೇಶ್ವರರು, ಪುರಂದರರು, ಕನಕದಾಸರು ಮತ್ತು ಅಕ್ಕ ಮಹಾದೇವಿಯವರಂತಹ ಸಂತರು ಸಮಾಜದಲ್ಲಿ ಪ್ರೀತಿ, ಸಮಾನತೆ ಮತ್ತು ಏಕತೆ ಸಂದೇಶ ಹರಡಿದರು. ಶ್ರೀರಾಮಕೃಷ್ಣ ಪರಮಹಂಸರು ಒಬ್ಬ ಮಹಾನ್ ಸಂತ, ಯೋಗಿ ಮತ್ತು ಆಧ್ಯಾತ್ಮಿಕ ಗುರುಗಳಾಗಿದ್ದರು. ದೇವರ ಮೇಲಿನ ಅವರ ಆಳವಾದ ಭಕ್ತಿ, ಆಧ್ಯಾತ್ಮಿಕ ಅಭ್ಯಾಸವು ಅವರಿಗೆ `ಪರಮಹಂಸ' ಎಂಬ ಬಿರುದನ್ನು ಗಳಿಸಿತು. ಅವರು ತಾಯಿ ಕಾಳಿಯ ಆರಾಧನೆಯ ಮೂಲಕ ಅಂತಿಮ ಸತ್ಯ ಅರಿತುಕೊಂಡರು ಮತ್ತು ಎಲ್ಲಾ ಧರ್ಮಗಳು ಒಂದೇ ಪರಮಾತ್ಮನ ಮಾರ್ಗಗಳಾಗಿವೆ. ಪ್ರತಿಯೊಂದು ಧರ್ಮದ ಸಾರವು ಪ್ರೀತಿ, ಕರುಣೆ ಮತ್ತು ಸತ್ಯ ಎಂದು ಅರಿತುಕೊಂಡರು. `ಶ್ರೀರಾಮಕೃಷ್ಣರು ಪ್ರಾಚೀನ ಮತ್ತು ಆಧುನಿಕ ಆಧ್ಯಾತ್ಮಿಕತೆಯ ನಡುವಿನ ಸೇತುವೆ' ಎಂದು ರವೀಂದ್ರನಾಥ ಟ್ಯಾಗೋರ್ ಹೇಳಿದ್ದರು. ಅವರ ಈ ಹೇಳಿಕೆ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಯುವಕರಿಗೆ ಜ್ಞಾನ, ತಂತ್ರಜ್ಞಾನ ಮತ್ತು ಅವಕಾಶಗಳ ಕೊರತೆಯಿಲ್ಲ. ಅವರು ವಿವೇಕಾನಂದರ ಆದರ್ಶಗಳಿಂದ ಸೂರ್ತಿ ಪಡೆಯಬೇಕು ಮತ್ತು ಜೀವನದಲ್ಲಿ ಉತ್ತಮ ವ್ಯಕ್ತಿತ್ವ, ಶಿಸ್ತು, ಸಮಗ್ರತೆ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಭೌತಿಕ ಪ್ರಗತಿಯ ಜತೆಗೆ ಮಾನಸಿಕ ಅಶಾಂತಿ ಹೆಚ್ಚುತ್ತಿರುವಾಗ, ಈ ಮಹಾನ್ ವ್ಯಕ್ತಿಗಳ ಸಂದೇಶಗಳು ನಮಗೆ ಮಾರ್ಗದರ್ಶನ ನೀಡುತ್ತವೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಧರ್ಮ ಎಂದರೆ ಪೂಜಾ ಪದ್ಧತಿಯೇ ಅಲ್ಲ ಅನ್ನುವುದನ್ನು ಮೊದಲನೇ ಬಾರಿ ನಿರೂಪಣೆಯನ್ನು ಮಾಡಿದವರು ವಿವೇಕಾನಂದರು. ಧರ್ಮದ ಬಗ್ಗೆ ಜಾಗೃತಿ ಮೂಡಿಸಿದರು. ಜಾಗತಿಕ ಮಟ್ಟದಲ್ಲಿ ಭಾರತ ಮತ್ತು ಹಿಂದುತ್ವದ ಮಹತ್ವ ತಿಳಿಸಿದರು. 39 ವರ್ಷ ಅವರು ಬದುಕಿದರೂ ಜಗತ್ತಿನಲ್ಲಿ ದೊಡ್ಡ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಿದ್ದಾರೆ ಎಂದರು.
ರಾಮಕೃಷ್ಣ ಆಶ್ರಮ ಗದಗ-ವಿಜಯಪುರದ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಾತನಾಡಿ, ದೇಶದ ಇತಿಹಾಸ ಮತ್ತು ನಾಗರಿಕತೆಯ ಅಧ್ಯಯನ ಮಾಡದೇ ಇದ್ದರೆ ಯಾವುದು ಕೆಡಕು-ಒಳಿತು ಗೊತ್ತಾಗುವುದಿಲ್ಲ. ವಿವೇಕಾನಂದ ಆಚಾರ-ವಿಚಾರಗಳು, ತತ್ವಗಳು ಪಾಲನೆಯಾಗಿದ್ದರೆ ದೇಶದಲ್ಲಿ ಭ್ರಷ್ಟಾಚಾರ, ಬಡತನ, ಧಾರಿದ್ರ‍್ಯ ನಿವಾರಣೆಯಾಗುತ್ತಿತ್ತು. ವಿವೇಕಾನಂದ ತತ್ವ ಪರಿಪಾಲನೆ ಇಂದಿನ ಅಗತ್ಯವಿದೆ ಎಂದರು.
ಮೈಸೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಪರಮಪೂಜ್ಯ ಸ್ವಾಮಿ ಮುಕ್ತಿದಾನಂದ ಮಹಾರಾಜ್, ಹುಬ್ಬಳ್ಳಿ ಮೂರುಸಾವಿರ ಮಠದ ಪರಮಪೂಜ್ಯ ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಶಾಸಕ ಅರವಿಂದ ಬೆಲ್ಲದ ಮಾತನಾಡಿದರು. ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿಜಯಾನಂದ ಸರಸ್ವತಿ, ಕಡಪಾ ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಅನುಪಮಾನಂದಜಿ ಮಹಾರಾಜ್, ಪರಿಷತ್ ಉಪಾಧ್ಯಕ್ಷ ಸ್ವಾಮಿ ಬೋಧಸ್ವರೂಪಾನಂದಜಿ ಮಹಾರಾಜ್, ಮಾಜಿ ಶಾಸಕ ಡಿ.ಆರ್. ಪಾಟೀಲ, ನವದೆಹಲಿಯ ಕೇಂದ್ರ ಗಾಂಧಿ ಸ್ಮಾರಕನಿಧಿ ಟ್ರಸ್ಟಿ ಡಾ.ಡಬ್ಲ್ಯು ಪಿ ಕೃಷ್ಣ, ಮೇಯರ್ ಜ್ಯೋತಿ ಪಾಟೀಲ ವೇದಿಕೆಯಲ್ಲಿದ್ದರು.