ಸತ್ಕಾರ್ಯಕ್ಕಾಗಿ ಜೀವನ ವಿನಿಯೋಗಿಸಿ: ವರ್ಧಂತ್ಯುತ್ಸವದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಕರೆ

satyasai photo1
Published on

ಚಿಕ್ಕಬಳ್ಳಾಪುರ: ನಿತ್ಯದ ಬದುಕಿನಲ್ಲಿ ಪ್ರತಿಯೊಬ್ಬರೂ ನಾನಾ ಜಂಜಾಟದಲ್ಲಿ ತೊಳಲಾಡುತ್ತಿರುತ್ತಾರೆ. ಕಷ್ಟ-ಸುಖಗಳೆಂಬ ವೈರುಧ್ಯ ನಮ್ಮೊಳಗೆ ಅಂತರ್ಗತವಾಗಿರುತ್ತದೆ. ಸುಖ ಪಡುವವರನ್ನು ಕಂಡಾಗ ಅಂತಹುದೇ ಸುಖಕ್ಕೆ ಹಾತೊರೆಯುವುದು ಮಾನವನ ಸಹಜ ಗುಣ. ಜೀವಿತದ ಉದ್ದೇಶ ಹಂತಹಂತವಾಗಿ ಮಾನವೀಯತೆಯನ್ನು ಪೋಷಿಸುತ್ತಾ ಮಾಧವತ್ವಕ್ಕೆ ತಲುಪುವುದಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಶ್ರೀ ಸತ್ಯಸಾಯಿ ಪ್ರೇಮಾಮೃತಂ ಸಭಾಭವನದಲ್ಲಿ ಕೈಗೊಂಡಿದ್ದ 43ನೇ ವರ್ಧಂತ್ಯುತ್ಸವವನ್ನು ಉದ್ದೇಶಿಸಿ ಮಾತನಾಡಿ, ಸುಖ-ದುಃಖಗಳು ಜೀವಿತ ಪ್ರಯಾಣದ ಭಾಗವಾಗಿ ಪ್ರತಿಯೊಬ್ಬರನ್ನೂ ಹಿಂಬಾಲಿಸುತ್ತವೆ. 11 ವರ್ಷಗಳ ಹಿಂದೆ ಗುರುಗಳಾದ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರು ತಮ್ಮ ಮಾನವೀಯ ವಿರಾಟ್ ಕಾರ್ಯ ಮುಂದುವರಿಸುವ ಉತ್ತರದಾಯಿತ್ವವನ್ನು ವಹಿಸುವ ಉತ್ತರಾಧಿಕಾರಿಯ ತಲಾಶೆಯಲ್ಲಿ ಇದ್ದರು. ಅಂಥ ಸಂದರ್ಭದಲ್ಲಿ ಉತ್ತರಾಧಿಕಾರಿಯಾಗಿ ತಮ್ಮ ಪ್ರವೇಶವಾಯಿತು ಎಂದು ತಿಳಿಸಿದರು.

ಗುರುಗಳಾದ ಶ್ರೀ ಸತ್ಯಸಾಯಿ ಬಾಬಾ ಅವರು ನನ್ನಿಂದ ನಿಸ್ವಾರ್ಥ ಸೇವೆ, ನಿಸ್ವಾರ್ಥ ಪ್ರೇಮ ಇವರೆಡನ್ನೂ ಸಾಧಿಸುವಲ್ಲಿ ನಿರ್ಭೀತ ಭಾವವನ್ನು ಬಯಸಿದ್ದರು. ಆ ಹಾದಿಯಲ್ಲಿ ನಾನು ಸಾಗುತ್ತಾ ಆರಂಭದಲ್ಲಿ, ಮುಂದೆ ಜಗತ್ತಿನಲ್ಲಿ ನಡೆಯುವ ವಿರಾಟ್ ಕಾರ್ಯದ ಬಗ್ಗೆ ಭವಿಷ್ಯ ನುಡಿದಿದ್ದೆ. ಇಂದು ಅದು ಸಾಕಾರ ರೂಪ ಪಡೆದಿರುವುದು ನಿಮ್ಮ ಕಣ್ಣ ಮುಂದೆ ಇದೆ. ಎಲ್ಲರೂ ಸತ್ಕಾರ್ಯಕ್ಕಾಗಿ ಜೀವಿತವನ್ನು ವಿನಿಯೋಗಿಸಬೇಕಾಗಿದೆ. ನಿಸ್ವಾರ್ಥ ಪ್ರೇಮದಿಂದ ಮಾತ್ರವೇ ಸಮಾಜದ ಸೇವೆಯನ್ನು ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಇಡೀ ಜಗತ್ತನ್ನೇ ವ್ಯಕ್ತಿಗತವಾಗಿ ಪರಿವರ್ತಿಸಲು ಸಾಧ್ಯವಾಗದಿದ್ದರೂ ಪರಿವರ್ತನೆಗೆ ಪೂರಕವಾಗುವ ವ್ಯಕ್ತಿಗಳನ್ನು ನಾವು ರೂಪಿಸಬಲ್ಲೆವು. ಆ ವ್ಯಕ್ತಿಗಳೇ ಉಳಿದ ವ್ಯಕ್ತಿಗಳನ್ನು ಪರಿವರ್ತಿಸಿ ಮಾನವೀಯತೆಯ ಕಡೆಗೆ ಇಡಿ ಜಗತ್ತನ್ನೇ ಪರಿವರ್ತನೆಯ ಪಥಕ್ಕೆ ಕೊಂಡೊಯ್ಯಬಲ್ಲರು. ಮಾನವೀಯತೆಗಾಗಿ ಮಿಡಿಯುವುದೇ ನನ್ನ ಜೀವಿತದ ಉದ್ದೇಶನನ್ನ ಜನ್ಮದಿನದ ಉಡುಗೊರೆಯಾಗಿ ನಿಸ್ವಾರ್ಥ ಪ್ರೇಮ ಹಾಗೂ ನಿಸ್ವಾರ್ಥ ಸೇವೆಯನ್ನು ನಿಮ್ಮಿಂದ ಬಯಸುತ್ತೇನೆ ಎಂದು ತಿಳಿಸಿದರು.

ಧ್ವನಿ ಸಾಂದ್ರಿಕೆ ಬಿಡುಗಡೆ: ಜನ್ಮದಿನದ ಆಚರಣೆಗಾಗಿ ಮೆರವಣಿಗೆಯಲ್ಲಿ ಆಗಮಿಸಿದ ಸದ್ಗುರುಗಳು, ಭಕ್ತರು ತಯಾರಿಸಿದ ಬೃಹತ್ ಕೇಕ್ ಕತ್ತರಿಸಿ ನಂತರ ಭಕ್ತರಿಗೆ ಸಿಹಿತಿಂಡಿ ವಿತರಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಸತ್ಯಸಾಯಿ ಮತ್ತು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಜೀವನ ಸಾಧನೆ ಬಿಂಬಿಸುವ ಕೃತಿಗಳು ಮತ್ತು ಧ್ವನಿ ಸಾಂದ್ರಿಕೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರೇಮ, ಸೇವೆಗಳ ಮೂಲಕ ಮಾನವ ಹೃದಯವನ್ನು ಮುಟ್ಟುತ್ತಿರುವ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಮನುಕುಲದ ಉದ್ಧಾರಕ್ಕಾಗಿ ಮಾನವೀಯತೆಯನ್ನು ಪೋಷಿಸಲು ಕರೆಕೊಡುವ ಸಂದೇಶಗಳು ಎದ್ದು ಕಾಣುತ್ತಿದ್ದವು. ಸದ್ಗುರುಗಳ ಜನ್ಮದಿನಾಚರಣೆಯ ನಂತರ ಖ್ಯಾತ ಗಾಯಕ ಸುಮಿತ್ ಟಪ್ಪು ಮತ್ತು ಬಳಗದವರಿಂದ ಸುಶ್ರಾವ್ಯ ಗಾನಸುಧೆ ಪ್ರಸ್ತುತಗೊಂಡಿತು. ಜನ್ಮದಿನಾಚರಣೆ ಸಂಭ್ರಮದಲ್ಲಿ ದೇಶ-ವಿದೇಶಗಳಿಂದ ಭಕ್ತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net