

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ದೇವನಹಳ್ಳಿ
ದೇವನಹಳ್ಳಿ ತಹಸೀಲ್ದಾರ್ ಶಿವರಾಜ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಕಡತಗಳನ್ನು ಜಾಲಾಡಿದರು.
ಲೋಕಾಯುಕ್ತ ಐಜಿ ಸೋಮನಾಥ ಚಟರ್ಜಿ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ತಹಸೀಲ್ದಾರ್ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೂ ಏಕಕಾಲದಲ್ಲಿ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಲಾಯಿತು.
ಅಪಾರ್ಟ್‌ಮೆಂಟ್ ಮೇಲೆ ದಾಳಿ: ತಹಸೀಲ್ದಾರ್ ವಾಸವಿದ್ದ ಕನ್ನಮಂಗಲ ವ್ಯಾಪ್ತಿಯ ಓಝೋನ್ ಅರ್ಬನ್ ಎಅಪಾರ್ಟ್‌ಮೆಂಟ್‌ನ 5ನೇ ಮಹಡಿಯ ಪ್ಲಾಟ್ ಹಾಗೂ ತಾಲೂಕು ಕಚೇರಿಯಲ್ಲಿನ ತಹಸೀಲ್ದಾರ್ ಕೊಠಡಿ, ಬೆಂಗಳೂರು ನೆಲಮಂಗಲ ರಸ್ತೆಯ 8ನೇ ಮೈಲಿಯ ಮನೆ, ಅರಸೀಕೆರೆಯ ಸೋದರನ ಮನೆ ಸೇರಿ ವಿವಿಧೆಡೆ ದಾಳಿ ನಡೆಸಲಾಗಿದೆ.
ನೋಟು ಎಣಿಕೆ ಯಂತ್ರ: ಮುಂಜಾನೆ 10 ಗಂಟೆಗೆ ಮೂರು ಕಾರುಗಳಲ್ಲಿ ಬಂದ 15ಕ್ಕೂ ಹೆಚ್ಚು ಅಧಿಕಾರಿಗಳು ಅಪಾರ್ಟ್‌ಮೆಂಟ್ ಪ್ರವೇಶಿಸಿ ತಹಸೀಲ್ದಾರ್ ಮನೆಯನ್ನು ಜಾಲಾಡಿದರು. ಇದೇ ವೇಳೆ ನೋಟುಗಳನ್ನು ಎಣಿಕೆ ಮಾಡುವ ಯಂತ್ರವೊಂದನ್ನು ಅಧಿಕಾರಿಗಳು ತಹಸೀಲ್ದಾರ್ ಮನೆಗೆ ತೆಗೆದುಕೊಂಡ ಹೋದ ದೃಶ್ಯ ಕಂಡುಬಂತು.
ತಹಸೀಲ್ದಾರ್ ಮೇಲೆ ಭೂ ಚಕ್ರ? ಎರಡು ವರ್ಷದ ಹಿಂದೆ ದೇವನಹಳ್ಳಿ ತಹಸೀಲ್ದಾರ್ ಆಗಿ ಬಂದ ಶಿವರಾಜ್ ವಿರುದ್ಧ ಭೂ ಅಕ್ರಮದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಹೋಗಿದ್ದರಿಂದ ದಾಳಿ ನಡೆದಿದೆ ಎನ್ನಲಾಗಿದೆ. ಇದರ ನಡುವೆ ಇನ್ನು 10 ತಿಂಗಳಲ್ಲಿ ನಿವೃತ್ತಿಯಾಗಲಿದ್ದು ಇತ್ತೀಚೆಗೆ ಇವರನ್ನು ವರ್ಗಾವಣೆ ಮಾಡಲಾಗಿತ್ತು. ಡಿಸಿ ಕಚೇರಿಯಲ್ಲಿದ್ದ ಬಾಲಕೃಷ್ಣ ಎಂಬುವರಿಗೆ ತಹಸೀಲ್ದಾರ್ ಹುದ್ದೆ ನಿಯೋಜಿಸಲಾಗಿತ್ತು. ಆದರೆ ಇದರ ವಿರುದ್ಧ ಕೆಎಟಿಗೆ ಹೋದ ಶಿವರಾಜ್ ತಡೆಯಾಜ್ಞೆ ತಂದು ಮತ್ತೆ ಕರ್ತವ್ಯಕ್ಕೆ ಹಿಂತಿರುಗಿದ್ದರು.