

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸಾರ್ವಜನಿಕರು ಸಮಸ್ಯೆಗಳನ್ನು ಹೊತ್ತು ಸರ್ಕಾರಿ ಕಚೇರಿಗೆ ಭೇಟಿ ನೀಡಿದಾಗ ಅಧಿಕಾರಿಗಳು ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಬೇಕು, ನಿಗಧಿತ ಸಮಯದೊಳಗೆ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಸಾರ್ವಜನಿಕರು ವೃಥಾ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು ಎಂದು ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಸೂಚಿಸಿದರು.
ದೇವನಹಳ್ಳಿ ತಾಲೂಕು ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಅಹವಾಲು ಸ್ವೀಕಾರ ಹಾಗೂ ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾರ್ವಜನಿಕ ಕೆಲಸ ಕಾರ್ಯಗಳನ್ನು ಮಾಡಲು ವಿಳಂಭ ನೀತಿ ಅನುಸರಿಸುವುದು ಅಪರಾಧ. ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸುವ ಜತೆಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಹೇಳಿದರು.
53 ಪ್ರಕರಣ ಇತ್ಯರ್ಥ: ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ದೂರುಗಳಲ್ಲಿ 74 ಪ್ರಕರಣಗಳನ್ನು ವಿಚಾರಣೆ ನಡೆಸಿದ ಉಪಲೋಕಾಯುಕ್ತರು 55 ಪ್ರಕರಣಗಳನ್ನು ಇತ್ಯರ್ಥ ಪಡಿಸಿದರು. ಅಕ್ರಮ ಖಾತೆ ವರ್ಗಾವಣೆ, ಸುಳ್ಳು ದಾಖಲೆ ಸೃಷ್ಟಿ, ಭೂ ಸ್ವಾಧೀನ ಹಾಗೂ ಪರಿಹಾರ ವಿತರಣೆ, ಅಕ್ರಮ ಟೆಂಡರ್‌ಮಾರಾಟ, ಪೌತಿ ಖಾತೆ, ಖಾತೆ ಬದಲಾವಣೆ, ಸರ್ಕಾರಿ ಹಾಗೂ ಗೋಮಾಳ ಒತ್ತುವರಿ, ಲಂಚಕ್ಕೆ ಬೇಡಿಕೆ, ಸರ್ಕಾರಿ ಆದೇಶಗಳನ್ನು ನೀಡಲು ವಿಳಂಬ, ಜಮೀನು ಸರ್ವೇ ಕಾರ್ಯ, ನಿವೃತ್ತ ಸರ್ಕಾರಿ ನೌಕರರ ಪಿಂಚಣಿ ಮುಂತಾದ ಪ್ರಕರಣಗಳ ವಿಚಾರಣೆ ನಡೆಸಿದ ಉಪಲೋಕಾಯುಕ್ತರು ಲೋಕಾಯುಕ್ತ ವ್ಯಾಪ್ತಿಗೆ ಬರುವ ಪ್ರಕರಣಗಳಲ್ಲಿ ಕರಾರು ಪತ್ರ, ನಿವೇಶನ ಹಂಚಿಕೆ, ಆದೇಶ ಪತ್ರ ವಿತರಣೆ ಮುಂತಾದ ಪ್ರಕರಣಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಿದರು. ಹದ್ದುಬಸ್ತು, ಅಕ್ರಮ ಖಾತೆ, ವಂಶ ವೃಕ್ಷ, ಭೂ ಸ್ವಾಧೀನ ಮುಂತಾದ ಪ್ರಕರಣಗಳನ್ನು ತನಿಖೆಗೆ ಆದೇಶಿಸಿ ವರದಿ ಬಂದ ನಂತರ ವಿಚಾರಣೆ ಮಾಡಲಾಗುವುದು ಎಂದು ಮುಂದೂಡಿದರು.
ವ್ಯಾಪ್ತಿಗೆ ಬರುವುದಿಲ್ಲ: ಪೋಲಿಸ್ ಇಲಾಖೆ, ನ್ಯಾಯಾಲಯ ವ್ಯಾಪ್ತಿಗೆ ಬರುವ ದೂರುಗಳನ್ನು ಆಯಾ ಇಲಾಖೆಗೆ ವಹಿಸಿ ಶೀಘ್ರ ತನಿಖೆ ನಡೆಸಿ ವರದಿ ನೀಡಿ ಎಂದು ಸೂಚಿಸಿದ ಣೀಂದ್ರ ಅವರು, ನ್ಯಾಯಾಲಯ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥ ಆಗುವವರೆಗೆ ಲೋಕಾಯುಕ್ತ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗೆ ಸೂಚನೆ: ರಾಜಣ್ಣ ಎಂಬ ದೂರುದಾರರು ಸಾರ್ವಜನಿಕ ಹಿತಾಸಕ್ತಿಯಡಿ ಸರ್ಕಾರಿ ನೌಕರರು ಆಯಾ ಕಾರ್ಯ ವ್ಯಾಪ್ತಿಯ ಸ್ಥಳದಲ್ಲಿ ಹಾಜರಿರುವುದಿಲ್ಲ ಎಂದು ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಿಸಿರುವುದನ್ನು ವಿಚಾರಿಸಿದ ಅವರು ಸರ್ಕಾರಿ ನೌಕರರಿಗೆ ವಹಿಸಿರುವಂತಹ ಕೆಲಸವನ್ನು ಆಯಾ ಕೇಂದ್ರ ಸ್ಥಾನದಲ್ಲಿದ್ದು ನಿರ್ವಹಿಸಬೇಕು. ಪ್ರತಿ ಕಚೇರಿಯಲ್ಲಿ ಹಾಜರಾತಿ ಪುಸ್ತಕ, ಚಲನವಲನ ಪುಸ್ತಕ, ನಗದು ವಹಿ ಪುಸ್ತಕಗಳನ್ನು ತೆರೆದು ದಿನನಿತ್ಯದ ವಹಿವಾಟುಗಳನ್ನು ಖಡ್ಡಾಯವಾಗಿ ನಮೂದಿಸಬೇಕು. ನಿರ್ದೇಶನ ಪಾಲಿಸದ ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ ನಡೆಸಿ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.