ದೇವನಹಳ್ಳಿಯಲ್ಲಿ ಕೆಂಪೇಗೌಡ ಸ್ಮಾರಕ ಶೀಘ್ರ

devnalli indipendance day
Published on

ಉಸ್ತುವಾರಿ ಸಚಿವ ಮುನಿಯಪ್ಪ ಭರವಸೆ

ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪೂರ್ವಜರ ಮೂಲ ನೆಲೆಯಾಗಿರುವ ದೇವನಹಳ್ಳಿಯಲ್ಲಿ ಸುಮಾರು 20 ಎಕರೆ ಜಾಗ ಗುರುತಿಸಿ ಕೆಂಪೇಗೌಡರ ಸಾಧನೆ ಕುರಿತ ಸಂಗ್ರಹಾಲಯ ಹಾಗೂ ಸ್ಮಾರಕ ನಿರ್ಮಾಣಕ್ಕೆ ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಪಟ್ಟಣ ಕ್ರೀಡಾಂಗಣದಲ್ಲಿ ಮಂಗಳವಾರ ಸ್ವಾತಂತ್ರ್ಯ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ, ಹಾಗೇ ಇಲ್ಲಿನ ಇತಿಹಾಸ ಸಾರುವ ಸ್ಥಳಗಳಿಂದ ಪ್ರಸಿದ್ಧಿ ಪಡೆದಿದೆ. ತಾಲೂಕನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದರು.

ತ್ಯಾಗ ಬಲಿದಾನದ ಪ್ರತೀಕ: ದೇಶವನ್ನು ಪರಕೀಯರಿಂದ ರಕ್ಷಿಸಿ ಅವರನ್ನು ಹೊರಹಾಕಲು ಅನೇಕ ದೇಶಪ್ರೇಮಿಗಳು ತ್ಯಾಗ ಬಲಿದಾನ ಮಾಡಿದ್ದಾರೆ. ಅವರೆಲ್ಲರ ಬಲಿದಾನದ ಪ್ರತೀಕವೇ ಸ್ವಾತಂತ್ರ್ಯ ಎಂದು ಮುನಿಯಪ್ಪ ಹೇಳಿದರು. ರಾಷ್ಟ್ರಗೀತೆ ನಾಡಗೀತೆಯ ಬಳಿಕ ಪೊಲೀಸ್ ತಂಡದಿಂದ ಗೌರವ ರಕ್ಷೆ ಪಡೆದು ಮಾತನಾಡಿದರು.
ಗಾಂಧಿ, ಕಿತ್ತೂರು ರಾಣಿ ಚನ್ನಮ್ಮ, ಬಾಲಗಂಗಾಧರನಾಥ ತಿಲಕ್, ಭಗತ್ ಸಿಂಗ್, ಸರ್ದಾರ್ ವಲಭಭಾಯಿ ಪಟೇಲ್, ಸುಭಾಷ್‌ಚಂದ್ರ ಬೋಸ್, ಲಾಲ್‌ಬಹದ್ದೂರ್ ಶಾಸ್ತ್ರೀ ಸೇರಿ ಸಾವಿರಾರು ದೇಶಭಕ್ತರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಜೀವನವನ್ನೇ ಮುಡುಪಾಗಿಟ್ಟಿದ್ದರು. ಇಂಥ ಮಹನೀಯರ ತ್ಯಾಗ ಆದರ್ಶ ಗುಣಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ಜವಾಹರಲಾಲ್ ನೆಹರು ಆಡಳಿತ ಚುಕ್ಕಾಣಿ ಹಿಡಿದ ಬಳಿಕ ದೇಶದ ಅಭಿವೃದ್ಧಿ ಚಿತ್ರಣ ಬದಲಾಗುತ್ತಾ ಹೋಯಿತು. ಇದಕ್ಕೆ ಪೂರಕವಾಗಿ ಡಾ ಬಿ.ಆರ್.ಅಂಬೇಡ್ಕರ್ ಅಧ್ಯಕ್ಷತೆ ಸಮಿತಿ ರಚಿಸಿ ದೇಶಕ್ಕೆ ಸಮರ್ಪಿಸಿದ ಸಂವಿಧಾನ ವಿಶ್ವಶ್ರೇಷ್ಠ ಸಂವಿಧಾನವಾಗಿ ಭಾರತದ ಏಕತೆ ಸಮಗ್ರತೆಯ ಪ್ರತೀಕವಾಯಿತು. ಬಾಬು ಜಗಜೀವನರಾಂ ಕೃಷಿ ಸಚಿವರಾಗಿ ದೇಶದಲ್ಲಿ ಹಸಿರು ಕ್ರಾಂತಿಯನ್ನೇ ಮಾಡಿದರು ಎಂದು ಸ್ಮರಿಸಿದರು.

ನುಡಿದಂತೆ ನಡೆದ ಸರ್ಕಾರ: ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಅನುಷ್ಠಾನ ಮಾಡುವ ಮೂಲಕ ನುಡಿದಂತೆ ನಡೆದಿದೆ. ಈ ದಿಟ್ಟ ಹೆಜ್ಜೆ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಉಸ್ತುವಾರಿ ಸಚಿವರು ಹೇಳಿದರು. ಜಿಲ್ಲಾ ವ್ಯಾಪ್ತಿಯಲ್ಲಿ ಜುಲೈನಲ್ಲಿ 21 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುವ ಮೂಲಕ ಶಕ್ತಿಯೋಜನೆಗೆ ಶಕ್ತಿ ತುಂಬಿದ್ದಾರೆ. ಗೃಹಜ್ಯೋತಿಗೆ ಜಿಲ್ಲೆಯಲ್ಲಿ 4,22,316 ಗ್ರಾಹಕರು ಅರ್ಹರಾಗಿದ್ದಾರೆ. ಜುಲೈ ಅಂತ್ಯದ ವೇಳೆಗೆ 3,07,534 ಗ್ರಾಹಕರ ಮನೆಗಳಿಗೆ ಗೃಹಜ್ಯೋತಿ ಬೆಳಗಿದೆ ಎಂದರು. ಹಸಿವುಮುಕ್ತ ರಾಜ್ಯವನ್ನಾಗಿಸಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ನಾವು ಅಕ್ಕಿ ಕೊಡುತ್ತೇವೆ ಎಂದಿದ್ದೇವೆ. ಅದರಂತೆ ನಡೆಯಲು ಬದ್ಧರಾಗಿದ್ದೇವೆ. ಈ ತಿಂಗಳು ಹಣ ಅಕ್ಕಿ ಬದಲಿಗೆ ನಗದು ಸಂದಾಯವಾಗಲಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ 10 ಕೆಜಿ ಅಕ್ಕಿ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಈ ಯೋಜನೆಯ ಅನುಷ್ಠಾನಕ್ಕೆ ಬಜೆಟ್‌ನಲ್ಲಿ 10 ಸಾವಿರ ಕೋಟಿ ರೂ.ಅನುದಾನ ಒದಗಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net