

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರತಿ ವರ್ಷ ಸ್ವಾತಂತ್ರ್ಯ ದಿನದಂದು ತ್ರಿವರ್ಣ ಬಣ್ಣದ ಬಲೂನು ಹಾರಿಬಿಡುವ ಸಂಪ್ರದಾಯಕ್ಕೆ ಜಿಲ್ಲಾಡಳಿತ ಈ ಬಾರಿ ಬ್ರೇಕ್ ಹಾಕಿದೆ.
ಸ್ವಾತಂತ್ರ್ಯೋತ್ಸವ ಸಂಭ್ರಮದ ವೇಳೆ ಪರಿಸರಕ್ಕೆ ಮಾರಕ ಹಾಗೂ ಪ್ರಾಣಿ ಪಕ್ಷಿಗಳ ಜೀವಕ್ಕೆ ಕುತ್ತು ತರುವ ಅಪಾಯಕಾರಿ ರಾಸಾಯನಿಕ ತುಂಬಿದ ಬಲೂನುಗಳನ್ನು ಹಾರಿಬಿಡುತ್ತಿದ್ದ ಸಂಪ್ರದಾಯಕ್ಕೆ ತಿಲಾಂಜಲಿ ಬಿಡಲಾಗಿದೆ. ಮೂಲಕ ಪರಿಸರ ಜಾಗೃತಿಯೊಂದಿಗೆ ವರ್ಣರಂಜಿತ ಸ್ವಾತಂತ್ರ್ಯೋತ್ಸವ ಆಚರಿಸುವ ಮೂಲಕ ಇತರೆ ಜಿಲ್ಲೆಗಳಿಗೆ ಗ್ರಾಮಾಂತರ ಜಿಲ್ಲಾಡಳಿತ ಮಾದರಿ ಎನಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಗೌರವ ವಂದನೆ:
ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ದೇವನಹಳ್ಳಿ ಪಟ್ಟಣದ ಕ್ರೀಡಾಂಗಣದಲ್ಲಿ ಗುರುವಾರ ವರ್ಣರಂಜಿತ ಕಾರ್ಯಕ್ರಮದೊಂದಿಗೆ 78ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ತ್ರಿವರ್ಣ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಜಿಲ್ಲಾ ಪೊಲೀಸರು ಕ್ರೀಡಾಂಗಣದಲ್ಲಿ ನಡೆಸಿಕೊಟ್ಟ ಪೊಲೀಸ್ ಕವಾಯತು ಗಮನ ಸೆಳೆಯಿತು, ಉಸ್ತುವಾರಿ ಸಚಿವ ತೆರೆದ ವಾಹನದಲ್ಲಿ ಪೊಲೀಸರಿಂದ ಗೌರವ ರಕ್ಷೆ ಸ್ವೀಕರಿಸಿದರು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಜನರ ಗಮನ ಸೆಳೆದರು.
ಅಂಗಾಂಗ ದಾನ ಮಾಡಿದ ಕುಟುಂಬಗಳಿಗೆ ಸನ್ಮಾನ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಅಂಗಾಂಗ ದಾನ ಮಾಡಿದ ಜಿಲ್ಲೆಯ 15 ಕುಟುಂಬಗಳಿಗೆ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಸಹಿಯುಳ್ಳ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಉದ್ಯೋಗ ಮೇಳದ ಪೋಸ್ಟರ್ ಬಿಡುಗಡೆ: ದೇವನಹಳ್ಳಿ ಟೌನ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸೆ.13 ರಂದು ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಇದರ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗಣ್ಯರು ಉದ್ಯೋಗ ಮೇಳ’ದ ಪೋಸ್ಟರ್ ಬಿಡುಗಡೆಗೊಳಿಸಿದರು. ಮಹಾತ್ಮಗಾಂಧಿ ನರೇಗಾ ಯೋಜನೆಯ ಸಂಪೂರ್ಣ ಮಾಹಿತಿಯುಳ್ಳ ಕೈಪಿಡಿ ಹಾಗೂ ಭಿತ್ತಿ ಪತ್ರ ಅನಾವರಣ ಮಾಡಲಾಯಿತು.
ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ:
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕಗಳಿಸಿದ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕ್ರೀಡಾಂಗಣ ಅಭಿವೃದ್ಧಿಗೆ ಅನುದಾನ: ಜಿಲ್ಲಾ ಕ್ರೀಡಾಂಗಣಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಭಿವೃದ್ಧಿ ಮಂಡಳಿ ವತಿಯಿಂದ 20.24 ಎಕರೆ ಭೂಮಿಯನ್ನು ದೊಡ್ಡಬಳ್ಳಾಪುರ ತಾಲೂಕು ಆದಿ ನಾರಾಯಣ ಹೊಸಹಳ್ಳಿ ಗ್ರಾಮದಲ್ಲಿ ಹಂಚಿಕೆ ಮಾಡಲಾಗಿದ್ದು, ಜಿಲ್ಲಾ ಕ್ರೀಡಾಂಗಣದ ಕಾಮಗಾರಿಯ ಪೂಜೆಯನ್ನು ಗಾಂಧಿ ಜಯಂತಿಯಂದು ನೆರವೇರಿಸಲಾಗುವುದು ಎಂದು ಸಚಿವರು ತಿಳಿಸಿದರು. ದೇವನಹಳ್ಳಿ ಸೂಲಿಬೆಲೆ ಮುಖ್ಯ ರಸ್ತೆಯ ದೇವನಹಳ್ಳಿ ಟೌನ್ ಕ್ರೀಡಾಂಗಣಕ್ಕೆ ವಿಶೇಷ ಅನುದಾನದಡಿಯಲ್ಲಿ 50 ಲಕ್ಷ ರೂ. ಮತ್ತು ದೇವನಹಳ್ಳಿ ಸರ್ಕಾರ ಆಸ್ಪತ್ರೆ ಹಿಂಭಾಗದ ದೇವನಹಳ್ಳಿ ತಾಲೂಕು ಕ್ರೀಡಾಂಗಣಕ್ಕೆ ಸ್ಥಳೀಯ ಪ್ರದೇಶಭಿವೃದ್ಧಿ ಯೋಜನೆಯಡಿಯಲ್ಲಿ 1 ಕೋಟಿ ರೂ. ಅನುದಾನವನ್ನು ಅಭಿವೃದ್ಧಿಗೆ ನೀಡಲಾಗುವುದು ಎಂದರು.
ವರದಿ ಪರಿಣಾಮ:
ಸ್ವಾತಂತ್ರ್ಯೋತ್ಸವ ಸಂಭ್ರಮದ ವೇಳೆ ರಾಸಾಯನಿಕ ತುಂಬಿದ ಬಲೂನುಗಳನ್ನು ಹಾರಿಬಿಡುವುದರಿಂದ ಪರಿಸರ ನಾಶದ ಜತೆಗೆ ಮೂಕಜೀವಿಗಳ ಪ್ರಾಣಕ್ಕೆ ಕುತ್ತು ತರುವ ಬಗ್ಗೆ ಪರಿಸರ ತಜ್ಞರು, ವನ್ಯಜೀವಿ ಪ್ರೇಮಿಗಳು ಎಚ್ಚರಿಕೆ ನೀಡಿದ್ದರು. ಯಾರೂ ಬಲೂನುಗಳನ್ನು ಹಾರಿಬಿಡದಂತೆ ಮನವಿ ಮಾಡಿದ್ದರು ಈ ಬಗ್ಗೆ ಆ.13ರಂದು ವಿಜಯವಾಣಿ ‘ಸ್ವಾತಂತ್ರ್ಯೋತ್ಸವಕ್ಕೆ ಬಲೂನು ಬಳಕೆ ಬೇಡ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.