

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಕೆಐಎಡಿಬಿ ಭೂ ಸ್ವಾಧೀನಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿರುವ ರೈತ ಹೋರಾಟಗಾರರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು, ಜೂ.25 ರಂದು ದೇವನಹಳ್ಳಿ ಚಲೋ ಹಮ್ಮಿಕೊಂಡಿದ್ದಾರೆ.
ಭೂಸ್ವಾಧೀನ ಹೋರಾಟಗಾರರ ಧರಣಿ ಸತ್ಯಾಗ್ರಹಗಳು ಸಾವಿರಾರು ದಿನ ಪೂರೈಸಿದ್ದರೂ ಸರ್ಕಾರ ಹೋರಾಟಗಾರರ ಬೇಡಿಕೆಗಳಿಗೆ ಸ್ಪಂದಿಸದ ಹಿನ್ನಲೆಯಲ್ಲಿ ಆಕ್ರೋಶಗೊಂಡಿರುವ ಹೋರಾಟಗಾರರು ನಿರ್ಣಾಯಕ ಹೋರಾಟಕ್ಕೆ ಮುಂದಾಗಿದ್ದಾರೆ.
ರೈತರ ಪ್ರಬಲ ವಿರೋಧದ ನಡುವೆಯೂ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿರುವ ಸರ್ಕಾರದ ನಡೆ ಖಂಡಿಸಿ ದೇವನಹಳ್ಳಿ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆಗೆ ಸಿದ್ದತೆ ನಡೆದಿದೆ. ಸರ್ಕಾರ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ರೈತ ಹೋರಾಟಗಾರರು ಪ್ರತಿಭಟನೆ ನಡೆಸಲಿದ್ದು ರಾಜ್ಯದ ವಿವಿಧ ಕಡೆಯ ರೈತ ಹೋರಾಟಗಾರರು ದೇವನಹಳ್ಳಿ ಚಲೋದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅನಿರ್ದಿಷ್ಟಾವಧಿ ಹೋರಾಟ: ದೇವನಹಳ್ಳಿ ತಾಲೂಕು ಕಚೇರಿ ಎದುರು ಪ್ರತಿಭಟಿಸಲು ರಾಜ್ಯಾದ್ಯಂತ ದೇವನಹಳ್ಳಿ ಚಲೋಗೆ ಬರುವಂತೆ ರಾಜ್ಯದ ಎಲ್ಲ ಬಲವಂತದ ಹಾಗೂ ಅನ್ಯಾಯದ ಭೂ ಸ್ವಾಧೀನ ವಿರೋಧಿಸುತ್ತಿರುವ ರೈತರಿಗೆ ಹಾಗೂ ರೈತ, ಕಾರ್ಮಿಕ, ದಲಿತ, ಮಹಿಳಾ, ವಿದ್ಯಾರ್ಥಿ-ಯುವಜನರಿಗೆ ಸಂಯುಕ್ತ ಹೋರಾಟ-ಕರ್ನಾಟಕ ಕರೆ ನೀಡುತ್ತಿದೆ. ಇದು ನಿರ್ಣಾಯಕ ಹೋರಾಟವಾಗಿದ್ದು ಸರ್ಕಾರ ಈ ಭೂ ಸ್ವಾಧೀನ ಪ್ರಕ್ರಿಯೆ ಸಂಪೂರ್ಣವಾಗಿ ಕೈಬಿಡುವ ತನಕ ಹಿಂದೆಸರಿಯದೆ ಮುಂದುವರೆಯಲಿದೆ ಎಂದು ಮುಖಂಡರು ತಿಳಿಸಿದ್ದಾರೆ.
4 ವರ್ಷಗಳ ಹೋರಾಟ: ಕಳೆದ 1180 ದಿನಗಳಿಂದ ಅಂದರೆ ಸುಮಾರು ನಾಲ್ಕು ವರ್ಷಗಳಿಂದ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ನಾಡ ಕಚೇರಿ ಮುಂದೆ ಅನಿರ್ದಿಷ್ಟ ಪ್ರತಿಭಟನೆ ನಡೆಸುತ್ತಿದ್ದಾರೆ. ಶೇ.80 ರೈತರು ಲಿಖಿತವಾಗಿ ಭೂ ಸ್ವಾಧೀನಕ್ಕೆ ಅಸಮ್ಮತಿ ಹಾಗೂ ವಿರೋಧವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದರೂ, ಬಲವಂತದ ಭೂ ಸ್ವಾಧೀನಕ್ಕೆ ಕ್ರಮವಹಿಸಿರುವುದು, ಭೂ ಸ್ವಾಧೀನ ಕಾಯ್ದೆ-2013 ರ ಸ್ಪಷ್ಠ ಉಲ್ಲಂಘನೆಯಾಗಿದೆ ಎಂದು ರೈತ ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್ ತಿಳಿಸಿದ್ದಾರೆ.
ಉಸ್ತುವಾರಿ ಮಂತ್ರಿ ವಿರುದ್ಧ ಆಕ್ರೋಶ: ಇತ್ತೀಚಿಗಿನ ಸಭೆಯೂ ಸೇರಿ ಕಳೆದ ನಾಲ್ಕು ವರ್ಷಗಳಲ್ಲಿ ರೈತರ ಪ್ರತಿಭಟನಾ ಒತ್ತಡ ಹೆಚ್ಚಿದ ಸಂದರ್ಭದಲ್ಲೆಲ್ಲಾ ಮುಖ್ಯಮಂತ್ರಿ ನೇತೃತ್ವದಲ್ಲಿ ನಾಲ್ಕಾರು ಸಭೆಗಳು, ಉಸ್ತುವಾರಿ ಮಂತ್ರಿ ನೇತೃತ್ವದಲ್ಲಿ ಹತ್ತಾರು ಸಭೆಗಳು ಅಲ್ಲದೇ ಸ್ವತಃ ಉಸ್ತುವಾರಿ ಮಂತ್ರಿ ಹತ್ತಾರು ಬಾರಿ ಧರಣಿ ಸ್ಥಳಕ್ಕೆ ಭೇಟಿ ಕೊಟ್ಟು ರೈತರ ಪರವಾಗಿ ತೀರ್ಮಾನ ಮಾಡುವುದಾಗಿ ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ರೈತರ ಒಪ್ಪಿಗೆ ಇಲ್ಲದೇ ಭೂ ಸ್ವಾಧೀನ ಮುಂದುವರೆಸುವುದಿಲ್ಲ ಎಂದು ಸಾರ್ವಜನಿಕವಾಗಿ ಹಲವಾರು ಬಾರಿ ಸ್ಪಷ್ಟ ಪಡಿಸಿದ್ದಾರೆ. ಈ ರೀತಿ ಭರವಸೆ ನೀಡಿ ಒಳಗೊಳಗೆ ಭೂಸ್ವಾಧೀನದ ಪ್ರಕ್ರಿಯೆ ಮುಂದುವರೆಸಿ ಅಂತಿಮ ಅಧಿಸೂಚನೆ ಹೊರಡಿಸಿರುವುದು ರೈತರಲ್ಲಿ ಹತಾಶೆಯುಂಟು ಮಾಡಿದೆ ಎಂಬುದು ಹೋರಾಟಗಾರರ ಆಕ್ರೋಶವಾಗಿದೆ.
ಪೊಲೀಸರಿಂದ ಧಮಕಿ: ದೇವನಹಳ್ಳಿ ಪೊಲೀಸ್ ಠಾಣೆಯಿಂದ ಅಲ್ಲಿನ ಎಲ್ಲ ಸಂಘಟನೆಗಳ ಮುಖಂಡರಿಗೂ ದೇವನಹಳ್ಳಿ ವ್ಯಾಪ್ತಿಯಲ್ಲಿ ನಿಶೇಧಾಜ್ಞೆ ಇದ್ದು, ಹೋರಾಟಕ್ಕೆ ಮುಂದಾಗುವುದಾದರೆ ಕ್ರಮ ತೆಗೆದುಕೊಳ್ಳುವುದಾಗಿ ಧಮಕಿ ಪತ್ರ ಕಳುಹಿಸಲಾಗಿದೆ. ಪೋಲೀಸರು ಅವರು ಮಾಡುವ ಕೆಲಸ ಅವರು ಮಾಡಲಿ, ನ್ಯಾಯ ಉಳಿಸಿಕೊಳ್ಳಲು ನಾವು ಮಾಡಲೇಬೇಕಾದ ಹೋರಾಟ ನಾವು ಮುಂದುವರೆಸುತ್ತೇವೆ. ಕೇಸಿಗಾಗಲೀ, ಜೈಲಿಗಾಗಲೀ, ಲಾಠಿಗಾಗಲೀ, ಗುಂಡಿಗೂ ಹೆದರುವ ಪ್ರಶ್ನೆಯೇ ಇ ಹೋರಾಟದಿಂದ ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ ಎಂಬುದು ಹೋರಾಟಗಾರರ ನಿರ್ಣಾಯವಾಗಿದೆ.
ಬಹುರಾಷ್ಟ್ರೀಯ ಸಂಸ್ಥೆಗಳು, ರಿಯಲ್ ಎಸ್ಟೇಟ್ ಮಾಫಿಯಾಗಳ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಬಲವಂತದ ಹಾಗೂ ಅನ್ಯಾಯದ ಭೂಸ್ವಾಧೀನಕ್ಕೆ ಮುಂದಾಗಿದೆ. ಈ ದುರುದ್ದೇಶ ಈಡೇರುವುದಕ್ಕೆ ರಾಜ್ಯದ ರೈತ ಸಮುದಾಯ ಅವಕಾಶ ನೀಡುವುದಿಲ್ಲ ಮತ್ತು ಚನ್ನರಾಯಪಟ್ಟಣ ರೈತರ ಹೋರಾಟಕ್ಕೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಸೇರಿ ರಾಜ್ಯದ ಎಲ್ಲ ಭೂ ಸ್ವಾಧೀನದ ಭೀತಿ ಎದುರಿಸುತ್ತಿರುವ ರೈತರನ್ನು ಒಗ್ಗೂಡಿಸಿ ಚನ್ನರಾಯಪಟ್ಟಣ ಭೂ ಸ್ವಾಧೀನಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಲು ದೇವನಹಳ್ಳಿ ಚಲೋ ಹಮ್ಮಿಕೊಳ್ಳಲಾಗಿದೆ.
ಕಾರಹಳ್ಳಿ ಶ್ರೀನಿವಾಸ್, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಖಂಡ