

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇಂದಿಗೂ ಹಲವು ಹಳ್ಳಿಗಳಿಗೆ ಅದರಲ್ಲೂ ಬೆಂಗಳೂರು ಕೂಗಳತೆ ದೂರದ ದೇವನಹಳ್ಳಿ ಕ್ಷೇತ್ರದ ಗ್ರಾಮಗಳಿಗೆ ಬಸ್ ಸೌಲಭ್ಯವಿಲ್ಲದಿರುವುದು ಬೇಸರದ ಸಂಗತಿ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ಗುಡುವನಹಳ್ಳಿ, ಚಿಕ್ಕತತ್ತಮಂಗಲ ಗೇಟ್, ಗಡ್ಡದನಾಯಕನಹಳ್ಳಿ, ಮಂಡಿಬೆಲೆ ಮಾರ್ಗ ವಿಜಯಪುರ ತಲುಪಲು ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ಈಗಾಗಲೇ ದೇವನಹಳ್ಳಿಯಲ್ಲಿ ಬಿಎಂಟಿಸಿ ಬಸ್ ಡಿಪೋ ಆಗಿದ್ದು, ಕೇಂದ್ರ ಸ್ಥಾನದಿಂದ ಎಲ್ಲ ಗ್ರಾಮಗಳಿಗೂ ಬಸ್ ಸೌಲಭ್ಯ ಕಲ್ಪಿಸುವಂತೆ ಬಿಎಂಟಿಸಿ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ತೂಬಗೆರೆ ಮತ್ತು ಜಾಲಿಗೆ ಭಾಗದಿಂದ ಸಿಟಿ ಮಾರುಕಟ್ಟೆಗೂ ಬಸ್ ಬೇಕೆಂದು ಮನವಿ ಮಾಡಿದ್ದು, ಶೀಘ್ರವೇ ಭರವಸೆ ಈಡೇರಿಸಲಾಗುವುದು ಎಂದರು.
ಪ್ರಸ್ತುತ ಚಾಲನೆ ನೀಡಿರುವ ಬಸ್ ಮಾರ್ಗದಿಂದ ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಅನುಕೂಲವಾಗಲಿದ್ದು, ಬೆಳಗ್ಗೆ ಮತ್ತು ಸಂಜೆ ಮಾರ್ಗದಲ್ಲಿ ಬಸ್ ಸಂಚರಿಸಲಿದೆ. ಹೆಚ್ಚಿನ ಅಗತ್ಯ ಬಿದ್ದಲ್ಲಿ ಬಿಎಂಟಿಸಿ ಬಸ್ ಓಡಿಸಲಾಗುವುದು ಎಂದ ಅವರು, ಪ್ರತಿ ಗ್ರಾಮಗಳಿಗೂ ಸಾರಿಗೆ ಸೌಲಭ್ಯ ದೊರೆಯುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ಸುಲಭಗೊಂಡು ಪಗ್ರತಿ ಹೊಂದಲು ಸಾಧ್ಯ ಎಂದರು.
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಗಡ್ಡದನಾಯಕನಹಳ್ಳಿ ಸುತ್ತಮುತ್ತಲಿನ ಜನ ಬಸ್ ಸೌಲಭ್ಯವಿಲ್ಲದೆ ಪರದಾಡುತ್ತಿದ್ದರು. ನಾನು ವಿಜಯಪುರದಲ್ಲಿ ಶಿಕ್ಷಕನಾಗಿ ಕೆಲಸ ಮಾಡುವಾಗ ಈ ಹಳ್ಳಿಗಳ ಮಕ್ಕಳು ನಡೆದುಕೊಂಡು ಶಾಲೆಗೆ ಬರುತ್ತಿದ್ದರು. ಇದರ ಜತೆಗೆ ಗಡ್ಡದನಾಯಕನಹಳ್ಳಿಯ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭಕ್ತರು ಮೂರ‌್ನಾಲ್ಕು ಕಿಮೀ ನಡೆದು ಹೋಗಬೇಕಿತ್ತು. ಹಾಗಾಗಿ ಈ ಭಾಗದ ಜನರ ಬಹುದಿನದ ಬೇಡಿಕೆಯನ್ನು ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಡಿ.ಸಿ. ವಿ.ಬಸವರಾಜು, ವಿಭಾಗೀಯ ನಿಯಂತ್ರಣಾಧಿಕಾರಿ ಹಿಮವರ್ಧನ ನಾಯ್ಡು ಅಲ್ಲೂರಿ, ವಿಭಾಗೀಯ ಸಂಚಲನಾಧಿಕಾರಿ ಎ.ಎನ್.ಮಂಜುನಾಥ್, ಘಟಕ ವ್ಯವಸ್ಥಾಪಕಿ ಶಿಲ್ಪಾ, ಸೂಪರಿಂಟೆಂಡೆಂಟ್ ಮೋಹನ್‌ಕುಮಾರ್, ಸಂಚಾರ ನಿಯಂತ್ರಕ ಡಿ.ನಾರಾಯಣಸ್ವಾಮಿ, ರಘು ಪ್ರಸಾದ್‌ಗೌಡ, ಮುಖಂಡರಾದ ಎಂ.ನಾರಾಯಣಸ್ವಾಮಿ, ಬಿ.ರಾಜಣ್ಣ, ಗೋಕರೆ ಗೋಪಾಲ್, ರಾಮಚಂದ್ರಪ್ಪ ಇದ್ದರು.