ಕಾಂಗ್ರೆಸ್ ವ್ಯರ್ಥ ಆರೋಪ ಯಾರೂ ನಂಬುವುದಿಲ್ಲ

devnalli bloodcamp
Published on

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಹೇಳಿಕೆ

ಸ್ವಯಂಪ್ರೇರಿತ ರಕ್ತದಾನ

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಹತ್ತು ವರ್ಷಗಳಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಆಡಳಿತದಿಂದಾಗಿ ಇಂದು ನಮ್ಮ ದೇಶ ವಿಶ್ವಭೂಪಟದಲ್ಲಿ ಮೊದಲ 3ನೇ ಸ್ಥಾನದಲ್ಲಿದ್ದು, ವಿಶ್ವಗುರುವಾಗಿ ಬೆಳೆದಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.
ತಾಲೂಕಿನ ಕಸಬಾ ಹೋಬಳಿಯ ಕೋಡಗುರ್ಕಿ ಕತ್ತಿಮಾರಮ್ಮ ದೇವಾಲಯದಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ರಾಷ್ಟ್ರೋತ್ಥಾನ ಪರಿಷತ್ ರಕ್ತನಿಧಿ, ಸ್ವಾಮಿ ವಿವೇಕಾನಂದ ಬ್ಲಡ್‌ಬ್ಯಾಂಕ್ ಸಹಯೋಗದಲ್ಲಿ ಬಿಜೆಪಿವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಸದೃಢ ಸೈನ್ಯ ಬಲ, ದಕ್ಷ ಆಡಳಿತದಿಂದಾಗಿ ಪ್ರಪಂಚದ ಕೆಲವೇ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿದೆ. ಇದಕ್ಕೆಲ್ಲಾ ಮೋದಿ ಅವರ ನಾಯಕತ್ವವೇ ಕಾರಣ. ಇದನ್ನು ಸಹಿಸದ ಕಾಂಗ್ರೆಸ್ ಹಲವು ಪ್ರತಿಪಕ್ಷಗಳನ್ನು ಸೇರಿಸಿಕೊಂಡು ಇಂಡಿಯಾ ಎಂಬ ಹೆಸರಿನ ಮೂಲಕ ದೇಶದ ಜನರ ದಿಕ್ಕುತಪ್ಪಿಸಲು ಹೊರಟಿದೆೆ. ದೇಶದ ಜನರಿಗೆ ಈ 9 ವರ್ಷ ಭಾರತ ಎಷ್ಟು ಪ್ರಗತಿ ಸಾಧಿಸಿದೆ. ಎಲ್ಲ ದೇಶಗಳು ಭಾರತವನ್ನು ಯಾಕೆ ಗೌರವಿಸುತ್ತಿದೆ ಎಂಬುದು ಗೊತ್ತಿದೆ. ಕಾಂಗ್ರೆಸ್‌ನವರು ಸುಮ್ಮನೆ ಕೇಂದ್ರದ ಬಗ್ಗೆ ವ್ಯರ್ಥ ಆರೋಪ ಮಾಡುತ್ತಿದ್ದಾರೆ. ಮತ್ತೊಂದು ಅವಧಿಗೂ ಜನ ಬಿಜೆಪಿ ಬೆಂಬಲಿಸುವುದು ಖಚಿತ ಎಂದರು.
ಕಾರ್ಮಿಕ ಪ್ರಕೋಷ್ಠದ ಸಂಚಾಲಕ ಬ್ಯಾಡರಂಗೇಗೌಡ ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ದೊಡ್ಡ ಪ್ರಮಾಣದಲ್ಲಿ ದಾನಿಗಳು ರಕ್ತದಾನ ಮಾಡುವ ಮೂಲಕ ಜೀವ ಉಳಿವಿಗೆ ನೆರವಾಗುತ್ತಿದ್ದಾರೆ. ಇಂತಹ ಸೇವಾ ಕಾರ್ಯ ಮಾಡುವುದರಲ್ಲಿಯೂ ಬಿಜೆಪಿ ಮುಂದೆ ಇದೆ ಎಂದರು.
ಕಾರ್ಮಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ನೀಲೇರಿ ಅಂಬರೀಶಗೌಡ ಮಾತನಾಡಿ, ಇದು ಬಿಜೆಪಿಯಿಂದ ನಡೆಯುತ್ತಿರುವ 13ನೇ ರಕ್ತದಾನ ಶಿಬಿರವಾಗಿದ್ದು, ತಾಲೂಕಿನ ಎಲ್ಲ ಹೋಬಳಿಗಳಲ್ಲಿಯೂ ನಿರಂತರವಾಗಿ ಪ್ರತಿ ವರ್ಷ ಶಿಬಿರಗಳನ್ನು ನಡೆಸಿ, ಸಾವಿರಾರು ಜನ ರಕ್ತದಾನ ಮಾಡಿದ್ದಾರೆ. ಅವರೆಲ್ಲರಿಗೂ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
ರೈತ ಮೋರ್ಚಾ ಉಪಾಧ್ಯಕ್ಷ ಲೋಕೇಶಗೌಡ, ಜಿಲ್ಲಾ ಉಪಾಧ್ಯಕ್ಷ ಕಂಡಕ್ಟರ್ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ತಾಲೂಕು ಅಧ್ಯಕ್ಷ ಸುಂದರೇಶ್, ಕನಕರಾಜ್, ಉಪಾಧ್ಯಕ್ಷೆ ಆರ್.ಪುನೀತಾ, ಕಾರ್ಮಿಕ ಪ್ರಕೋಷ್ಠದ ತಾಲೂಕು ಸಂಚಾಲಕ ಸುರೇಶಾಚಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net