

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಪದವಿ ಶಿಕ್ಷಣ ಪ್ರಪಂಚವನ್ನೇ ಅರ್ಥ ಮಾಡಿಕೊಳ್ಳಲು ಹೆಬ್ಬಾಗಿಲಾಗಿದೆ. ಪಾಲಕರ ಕನಸು ನನಸು ಮಾಡಬೇಕಾದರೆ ಅವರ ತ್ಯಾಗ, ಶ್ರಮ ಸದಾ ನೆನಪಿನಲ್ಲಿಟ್ಟುಕಂಡು ಅಬ್ಯಾಸ ಮಾಡಿದರೆ ವಿದ್ಯಾರ್ಥಿ ಜೀವನಕ್ಕೆ ಬಂಗಾರದ ಕಳೆ ಬರುತ್ತದೆ ಎಂದು ಇಂಡಿಯಾ ಫಾರ್ ಐಎಎಸ್ ಅಕಾಡೆಮಿ ಮುಖ್ಯಸ್ಥ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಭಿವಿನ್ಯಾಸಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣಕ್ಕೆ ಕರ್ನಾಟಕವೇ ಕಾಶಿ ಇದ್ದಂತೆ. ಇಂಗ್ಲಿಷ್ ಭಾಷೆ ಬರುವುದಿಲ್ಲ ಎಂಬ ಕೀಳರಿಮೆ ಬೇಡ. ಉದಾರೀಕರಣದ ಕಾರಣ ದೇಶದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಇರುವ ವ್ಯವಸ್ಥೆಯಲ್ಲಿಯೇ ಒಳಿತನ್ನು ಕಾಣುವ ಮನಸ್ಸು ಬೆಳೆಸಿಕೊಳ್ಳಬೇಕು ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಕ್ಕೆ ಪರೀಕ್ಷೆ ಮೂಲಕ ಪ್ರವೇಶ ಪಡೆಯಬೇಕು. ಇಂಗ್ಲಿಷ್ ಭಾಷೆಯ ಮೇಲೆ ಪ್ರಭುತ್ವ ಸಾಧಿಸಲು ಪ್ರಯತ್ನಿಸಬೇಕು. ಸಾಮಾನ್ಯ ಜ್ಞಾನ, ಸಿಂಪಲ್ ಇಂಗ್ಲಿಷ್, ಪಠ್ಯವನ್ನು ಅಭ್ಯಾಸ ಮಾಡಬೇಕು. ಇದಾದರೆ ಐಎಎಸ್, ಕೆಎಎಸ್ ಪಾಸಾಗಬಹುದು. ಸಣ್ಣ ವಯಸ್ಸಿನಲ್ಲಿ ಉನ್ನತ ಹುದ್ದೆ ಅಲಂಕರಿಸಬಹುದು ಎಂದರು.
ಸಂಪನ್ಮೂಲ ವ್ಯಕ್ತಿ ಪಿ.ವಿ.ನರಸಿಂಹಮೂರ್ತಿ ಮಾತನಾಡಿ, ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಓದಿದವರೇ ಉನ್ನತ ಸ್ಥಾನ ಅಲಂಕರಿಸಿದ್ದಾರೆ ಎನ್ನುವುದು ಸತ್ಯ. ವಿದ್ಯಾರ್ಥಿಗಳು ಗುರುತಿಸುವ ಹಾಗೆ ಬೆಳೆದರೆ ಗುರುವಿನ ಬದುಕು ಸಾರ್ಥಕ. ಕನ್ನಡ ಭಾಷೆ ಅನ್ನದ ಭಾಷೆಯಾಗಬೇಕು. ಇದಾಗಬೇಕಾದರೆ ಭಾಷೆಯನ್ನು ಅದರ ಮೂಲ ನೆಲೆಯಲ್ಲಿಯೇ ಅರಿಯುವ ಪ್ರಯತ್ನ ಮಾಡಬೇಕು ಎಂದರು.
ಪ್ರಾಧ್ಯಾಪಕರಾದ ಡಾ.ರವಿಕುಮಾರ್, ಕೆ.ಕೆ. ರವಿಚಂದ್ರ, ಡಾ.ಕೃಷ್ಣಮೂರ್ತಿ, ಡಾ.ಬಾಲಾಜಿ, ಶಿವಶಂಕರಪ್ಪ, ಡಾ.ನಾರಾಯಣಮ್ಮ, ಬನಶಂಕರಿ, ಶಿವಪ್ರಸಾದ್, ಉಪನ್ಯಾಸಕ ಮುನಿರಾಜು ಎಂ. ಅರಿಕೆರೆ ಇತರರು ಇದ್ದರು.