ದೇವಿಕೊಪ್ಪ ಗ್ರಾಮದೇವಿಯರ ಜಾತ್ರೆ 30ರಿಂದ

Devikoppa Gramadeviyar fair from January 30
Published on

ಕಲಘಟಗಿ: ತಾಲೂಕಿನ ದೇವಿಕೊಪ್ಪ ಗ್ರಾಮದ ಗ್ರಾಮದೇವತೆಯರ ದ್ವಿತೀಯ ಜಾತ್ರಾ ಮಹೋತ್ಸವ ಜ. 30ರಿಂದ ಫೆ. 7 ರವರೆಗೆ 9 ದಿನಗಳ ಕಾಲ ಜರುಗಲಿದೆ ಎಂದು ಗ್ರಾಮದ ಶ್ರೀ ರಾಮಲಿಂಗೇಶ್ವರ ಮಠದ ಶ್ರೀ ಶ್ರವಣಾನಂದ ಸ್ವಾಮೀಜಿ ತಿಳಿಸಿದರು.

ಗ್ರಾಮದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಜಾತ್ರಾ ಮಹೋತ್ಸವದ ಪ್ರಚಾರ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಶ್ರೀ ಗ್ರಾಮದೇವಿಯರ ಜಾತ್ರೆ ಅಂಗವಾಗಿ ಈಗಾಗಲೇ ದೇವಸ್ಥಾನದ ಟ್ರಸ್ಟ್ ಕಮಿಟಿ, ಜಾತ್ರಾ ಉತ್ಸವ ಸಮಿತಿಯವರು, ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಶ್ರೀ ದ್ಯಾಮವ್ವ ಮತ್ತು ಶ್ರೀ ದುರ್ಗಮ್ಮರ ಮೂರ್ತಿಗಳನ್ನು ಬಣ್ಣಕ್ಕೆ ಹಾಕಲಾಗಿದ್ದು, ಹೊರ ವಾರಗಳು ಆರಂಭಗೊಂಡಿದೆ ಎಂದರು.

ಜ. 30 ರಂದು ಬೆಳಗ್ಗೆ ಹೋಮ, ಹವನ, ದೇವಿಯರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳನ್ನು ಕಲಘಟಗಿ ಹನ್ನೆರಡುಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಜರುಗಲಿದೆ ಹಾಗೂ ಭಂಡಾರ ಹೊನ್ನಾಟದ ಮೂಲಕ ಗ್ರಾಮದೇವಿಯರ ಮೆರವಣಿಗೆ ಮೂಲಕ ಜಾತ್ರಾ ಉತ್ಸವದ ಚೌತಮನೆಗೆ ತಂದು ಪ್ರತಿಷ್ಠಾಪಿಸಲಾಗುವುದು. ಪ್ರತಿದಿನ ಸಂಜೆ ವಿವಿಧ ಮಠಾಧೀಶರಿಂದ ದೇವಿಯರಿಗೆ ಪೂಜೆ ಹಾಗೂ ಧರ್ಮಸಭೆ ಅನ್ನ ಪ್ರಸಾದ ಹಾಗೂ ಪ್ರತಿದಿನ ರಾತ್ರಿ ವಿವಿಧ ಕಲಾ ತಂಡದವರಿಂದ ಜಾನಪದ ಸಂಗೀತ, ಡೊಳ್ಳು, ಸೋಬಾನ, ಗೀಗಿಪದ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಸಂಗಯ್ಯಸ್ವಾಮಿ ಹಿರೇಮಠ, ದೇವಸ್ಥಾನದ ಟ್ರಸ್ಟ್ ಹಾಗೂ ಜಾತ್ರಾ ಸಮಿತಿಯವರು, ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net