ಹೋಳಿ ಹುಣ್ಣಿಮೆ ದಿನದಂದು ರಥೋತ್ಸವ

13 JLR 2
Published on

ಜಗಳೂರು: ತಾಲೂಕಿನ ದೇವಿಕೆರೆ ಗ್ರಾಮದ ಐತಿಹಾಸಿಕ ಕ್ಷೇತ್ರ ಕೊಡದಗುಡ್ಡದ ಶ್ರೀ ವೀರಭದ್ರ ಸ್ವಾಮಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಮಾ.11 ರಿಂದ 17 ರವರೆಗೆ ನಡೆಯಲಿದೆ.

ಪ್ರತಿವರ್ಷ ಹೋಳಿ ಹುಣ್ಣಿಮೆ ದಿನ ರಥೋತ್ಸವ ನಡೆಯುತ್ತದೆ. ರಥೋತ್ಸವಕ್ಕೆ ದಾವಣಗರೆ, ಚಿತ್ರದುರ್ಗ, ಬಳ್ಳಾರಿ, ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ. ಇನ್ನು ಕೆಲವು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ರಥೋತ್ಸವಕ್ಕೆ ಪಾದಯಾತ್ರೆ ಮೂಲಕ ಗುಡ್ಡಕ್ಕೆ ಬರುತ್ತಾರೆ. ಜಾತ್ರೆಗೆ ಬರುವ ಭಕ್ತರು ಟ್ರ್ಯಾಕ್ಟರ್, ಆಪೇ ಆಟೋ, ಎತ್ತಿನ ಬಂಡಿ, ಬೈಕ್​ಗಳಲ್ಲಿ ಬಂದಿಳಿಯುತ್ತಾರೆ.

ಭಕ್ತರಿಗೆ ವಸತಿ ಗೃಹಗಳನ್ನು ನಿರ್ವಿುಸಲಾಗಿದೆ. ಕೆಲವು ಭಕ್ತರು ಮರದ ಕೆಳಗೆ, ನೆರಳಿರುವ ಕಡೆ ಬಿಡಾರ, ಶಾಮಿಯಾನ ಹಾಕಿ ಮೂರು ದಿನ ಅಲ್ಲೇ ತಂಗುತ್ತಾರೆ. 400ಕ್ಕೂ ಅಧಿಕ ಪೌಳಿಗಳು ಇಲ್ಲಿ ಕಂಡುಬರುತ್ತವೆ.

ಧಾರ್ವಿುಕ ಕಾರ್ಯಕ್ರಮಗಳು: ಮಾ.11ರಂದು ಕಂಕಣಧಾರಣ ಮಹೋತ್ಸವ ಮತ್ತು ಮಾ.12 ಬುಧವಾರ ಮಹಾಗಣಾರಾಧನೆ ನಡೆಯಿತು. ಮಾ.13 ಗುರುವಾರದಂದು ಗಜವಾಹನೋತ್ಸವ, ಮಾ.15ರ ಬೆಳಗ್ಗೆ 6 ಗಂಟೆಗೆ ಅಗ್ನಿಕುಂಡ ಮಹೋತ್ಸವ ಮತ್ತು ಸಂಜೆ 4.30ಕ್ಕೆ ಮಹಾರಥೋತ್ಸವ, ಮಾ.17ರಂದು ಬೆಳಗ್ಗೆ 6ಕ್ಕೆ ಓಕುಳಿ ನೆರವೇರಲಿದೆ.

ಕುಡಿಯುವ ನೀರಿನ ವ್ಯವಸ್ಥೆ: ಜಾತ್ರೆಯಲ್ಲಿ ಭಕ್ತರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ದೇವಿಕೆರೆ ಗ್ರಾಪಂ ಮುಂಜಾಗ್ರತೆ ವಹಿಸಿದೆ. ತೇರು ಎಳೆಯುವ ಆವರಣದಲ್ಲಿ 5 ಕೊಳವೆಬಾವಿಗಳನ್ನು ಕೊರೆಸಿದೆ. ಸಾಲಾಗಿ 40 ನೀರಿನ ಮಿನಿ ತೊಟ್ಟಿಗಳನ್ನು ಕಟ್ಟಿಸಿದೆ. 12 ಟ್ಯಾಂಕರ್​ಗಳ ಮೂಲಕ ಭಕ್ತರಿಗೆ ಕುಡಿಯುವ ನೀರು ಪೂರೈಕೆ ಮಾಡಿದೆ. ಜತೆಗೆ ಜನರೇಟರ್ ಮುಂಜಾಗ್ರತ ಕ್ರಮವಾಗಿ 4 ಜನರೇಟರ್​ಗಳ ವ್ಯವಸ್ಥೆ ಕೂಡ ಮಾಡಿದೆ ಎಂದು ದೇವಸ್ಥಾನ ಕಮಿಟಿ ಕಾರ್ಯದರ್ಶಿ ರುದ್ರಸ್ವಾಮಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net