

ಬೆಂಗಳೂರು: ಕರೊನಾ ಆರ್ಭಟ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೂ ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆಂಡ್ ವೇರ್ಹೌಸಿಂಗ್ ಸೊಸೈಟಿ (ಕೆಡಿಎಲ್ಡಬ್ಲು್ಯಎಸ್)ಯಲ್ಲಿ ಮತ್ತೊಂದು ಕಮಿಷನ್ ದಂಧೆ ಆರೋಪ ಕೇಳಿಬಂದಿದೆ. ಪಿಪಿಇ ಕಿಟ್ ಹಾಗೂ ಸ್ಯಾನಿಟೈಸರ್ ಖರೀದಿಯಲ್ಲಿ ಅಕ್ರಮ ನಡೆದಿರುವ ಆರೋಪ ಚರ್ಚೆಯಲ್ಲಿರುವಾಗಲೇ ‘ನಾಸಲ್ ಕ್ಯಾನ್ಯುಲ್ ಥೆರಪಿ ಡಿವೈಸ್’ ಖರೀದಿಯಲ್ಲೂ ಅವ್ಯವಹಾರದ ಕಮಟು ಬಡಿದಿದೆ.
ನಾಸಲ್ ಕ್ಯಾನ್ಯುಲ್ ಥೆರಪಿ ಡಿವೈಸ್ ಖರೀದಿಸಿ ಸರಬರಾಜು ಮಾಡುವುದಕ್ಕಾಗಿ ಕೆಡಿಎಲ್ಡಬ್ಲು್ಯಎಸ್ ಮೇ 22ರಂದು ಟೆಂಡರ್ ಕರೆದಿತ್ತು. ಮೇ 29ರಂದು ಬಿಡ್ದಾರರು ದಾಖಲೆ ಸಲ್ಲಿಸಿದ್ದರು. ಬಳಿಕ ಮೇ 30ರಂದು ಟೆಂಡರ್ ದಾಖಲೆ ಸಲ್ಲಿಸುವ ಸಮಯವನ್ನು ವಿಸ್ತರಿಸಲಾಯಿತು. ಆದರೆ, ಪಾರದರ್ಶಕವಾಗಿ ನಡೆಯಬೇಕಿರುವ ಈ ಟೆಂಡರನ್ನು, ಕಮಿಷನ್ ಆಸೆಗಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ಕಾಯ್ದೆ (ಕೆಟಿಪಿಪಿ) 4(ಎ) ದುರ್ಬಳಕೆ ಮಾಡಿಕೊಂಡು ಏಕಾಏಕಿ ಷರತ್ತುಗಳನ್ನೇ ಬದಲಾಯಿಸಿ ಹೆಚ್ಚಿನ ಮೊತ್ತಕ್ಕೆ ಖರೀದಿಸಿದ ಆರೋಪ ಕೇಳಿಬಂದಿದೆ.
ಬೊಕ್ಕಸಕ್ಕೆ 4.5 ಕೋಟಿ ರೂ.ನಷ್ಟ
ಕೇರಳದಲ್ಲಿ ಇದೇ ಮಾದರಿಯ ಸಾಮಗ್ರಿಗೆ ಅಮೆರಿಕ ಮೂಲದ ಕಂಪನಿಯೊಂದು ಪ್ರತಿ ಯೂನಿಟ್ಗೆ 2,86,961 ರೂ.ನಂತೆ 3 ವರ್ಷದ ಖಾತ್ರಿ ನೀಡಿ ಪೂರೈಸಲು ಗುತ್ತಿಗೆ ಪಡೆದಿದೆ. ಆದರೆ, ಅದೇ ಮಾದರಿ ಸಾಮಗ್ರಿಯನ್ನು ಕೆಡಿಎಲ್ಡಬ್ಲ್ಯುಎಸ್ ಎರಡು ಪಟ್ಟು ಹೆಚ್ಚು ಅಂದರೆ ಪ್ರತಿ ಯೂನಿಟ್ಗೆ 4,36,000 ರೂ.ನಂತೆ 13 ಕೋಟಿ ರೂ. ವೆಚ್ಚದಲ್ಲಿ 300 ಯೂನಿಟ್ ಖರೀದಿಸಲು ಮುಂದಾಗಿದೆ. ಕೇರಳದಂತೆ ಖರೀದಿಸಿದ್ದಲ್ಲಿ 8.5 ಕೋಟಿ ರೂ.ವೆಚ್ಚದಲ್ಲಿ 300 ಯೂನಿಟ್ ಖರೀದಿಸಬಹುದಿತ್ತು. ಆದರೆ, ಕಮಿಷನ್ ಆಸೆಗಾಗಿ ಪ್ರತಿ ಯೂನಿಟ್ಗೆ 4,36,000 ರೂ.ನಂತೆ ಖರೀದಿಸಲು ಹೊರಟಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 4.5 ಕೋಟಿ ರೂ. ನಷ್ಟ ಉಂಟಾಗಲಿದೆ.
ಆರೋಗ್ಯಕರ ಸ್ಪರ್ಧೆ ಇಲ್ಲ
ಟೆಂಡರ್ನಲ್ಲಿ ಮೊದಲಿಗೆ ಸಂಸ್ಥೆಯ ವಾರ್ಷಿಕ ವಹಿವಾಟು 20 ಕೋಟಿ ರೂ. ನಿಗದಿಯಾಗಿತ್ತು. ಈ ಸಂಬಂಧ ಬಿಡ್ದಾರರಿಂದ ಆಕ್ಷೇಪಣೆ ಕೇಳಿಬಂದ ಹಿನ್ನೆಲೆಯಲ್ಲಿ ಮೇ 28 ರಂದು ನಡೆದ ಗವರ್ನರ್ ಕೌನ್ಸಿಲ್ ಸಭೆಯಲ್ಲಿ ವಾರ್ಷಿಕ ವಹಿವಾಟು ಮೊತ್ತವನ್ನು 5 ಕೋಟಿ ರೂ.ಗೆ ಇಳಿಸಲಾಯಿತು. ಅಲ್ಲದೆ, ಮೇ 29ರಂದು ನಡೆದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಎಂಎಇಎಸ್ಇ ಸಂಸ್ಥೆಗೆ 5 ಕೋಟಿ ರೂ ಹಾಗೂ ಇತರ ಸಂಸ್ಥೆಗಳಿಗೆ 10 ಕೋಟಿ ರೂ.ನಿಗದಿ ಮಾಡಲಾಯಿತು. ವಾರ್ಷಿಕ ವಹಿವಾಟಿನ ಮೊತ್ತ ಇಳಿಸಿದ ಮೇಲೆ 10 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿರುವ ಸಂಸ್ಥೆಗಳಿಗೆ ಟೆಂಡರ್ನಲ್ಲಿ ಭಾಗವಹಿಸಲು ಕಾಲಾವಕಾಶ ನೀಡಬೇಕಿತ್ತು. ಆದರೆ, ಕೇವಲ 2 ಸಂಸ್ಥೆಗಳು ಟೆಂಡರ್ನಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಲಾಗಿದೆ.
ಏನಿದು ನಾಸಲ್ ಕ್ಯಾನ್ಯುಲ್?
ಶ್ವಾಸಕೋಶ ಸಮಸ್ಯೆಗಳಿಂದ ಬಳಲುವ ರೋಗಿಗಳಿಗೆ ಅಥವಾ ಸ್ವಯಂ ಉಸಿರಾಟದ ಶಕ್ತಿ ಕಳೆದುಕೊಂಡವರಿಗಾಗಿ ಹೆಚ್ಚುವರಿ ಅಮ್ಲಜನಕ ಪೂರೈಸಲು ಇದನ್ನು ಬಳಸಲಾಗುತ್ತದೆ. ಜತೆಗೆ, ರೋಗಿಯ ಮೂಗಿನ ಮೂಲಕ ಗಂಟಲಿನಿಂದ ಶ್ವಾಸಕೋಶದ ಕಡೆಗೆ ಸಾಗುವ ವಾಯುನಾಳದವರೆಗೆ ಪೈಪ್ ತೂರಿಸಿ ಹೆಚ್ಚುವರಿ ಅಮ್ಲಜನಕ ಪೂರೈಸಲಾಗುತ್ತದೆ. ಇದರಿಂದ ರೋಗಿಯ ರಕ್ತದಲ್ಲಿ ಆಮ್ಲಜನಕ ನಿಗದಿತ ಮಟ್ಟದಲ್ಲಿ ಇರುವಂತೆ ಕಾಯ್ದುಕೊಳ್ಳಲು ಸಹಾಯವಾಗಲಿದೆ.
ಫೈನಾನ್ಶಿಯಲ್ ಬಿಡ್ನಲ್ಲಿ ಭಾಗವಹಿಸಿದ್ದ ಇಬ್ಬರು ಬಿಡ್ದಾರರ ಪೈಕಿ ಒಬ್ಬರು 4.97 ಲಕ್ಷ ರೂ. ಹಾಗೂ ಮತ್ತೊಬ್ಬರು 4.36 ಲಕ್ಷ ರೂ.ಗೆ ಬಿಡ್ ಮಾಡಿದ್ದರು. ಅಂತಿಮವಾಗಿ ಕಮಿಷನರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರತಿ ಯೂನಿಟ್ಗೆ 4.25 ಲಕ್ಷ ರೂ.ನಂತೆ ನಾಸಲ್ ಕ್ಯಾನ್ಯುಲ್ ಥೆರಪಿ ಡಿವೈಸ್ ಖರೀದಿಸಲು ತೀರ್ವನಿಸಲಾಗಿದೆ. | ಮಂಜುಶ್ರೀ ಅಪರ ನಿರ್ದೇಶಕಿ ಕೆಡಿಎಲ್ಡಬ್ಲು್ಯಎಸ್
30 ದಿನಗಳ ಕಾಲಾವಕಾಶ
ಕೆಟಿಪಿಪಿ ನಿಯಾಮಾನುಸಾರ ಟೆಂಡರ್ ಮೊತ್ತ 2 ಕೋಟಿ ರೂ.ಗಿಂತ ಅಧಿಕವಿದ್ದರೆ ಬಿಡ್ ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ ಕೊಡಬೇಕು. ವಿಶೇಷ ಸಂದರ್ಭದಲ್ಲಿ ಸರ್ಕಾರದಿಂದ ಅನುಮತಿ ಪಡೆದು ಟೆಂಡರ್ ನಡೆಸಬೇಕು. ಅಲ್ಲದೆ, ಇಲಾಖೆಯಿಂದ ಅನುಮತಿ ಪಡೆದು ಬಿಡ್ದಾರರಿಗೆ ಟೆಂಡರ್ನಲ್ಲಿ ಕೋರಿರುವ ದಾಖಲೆಗಳನ್ನು ಸಲ್ಲಿಸಲು ಕನಿಷ್ಠ 15 ದಿನಗಳ ಕಾಲಾವಕಾಶ ನೀಡಬೇಕು. ಆದರೆ, ಈ ಟೆಂಡರ್ನಲ್ಲಿ ಕೇವಲ 7 ದಿನ ಅವಕಾಶ ನೀಡಲಾಗಿದೆ.
| ಬೇಲೂರು ಹರೀಶ