

ವಿಜಯಪುರ: ನಗರದ ಪ್ರತಿಷ್ಠಿತ ಐಶ್ವರ್ಯ ನಗರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪ್ರಥಮ ಬಾರಿಗೆ ಜಂಬೂಸವಾರಿಯೊಂದಿಗೆ ದಸರಾ ಉತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲು ನಿರ್ಧರಿಸಲಾಗಿದೆ. ಒಂಬತ್ತು ದಿನಗಳ ಕಾಲ ನಿರಂತರ ಪೂಜೆ ಕೈಂಕರ್ಯಗಳು ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ವಿವೇಕಾನಂದ ಹುಂಡೆಕರ ಮಾಹಿತಿ ನೀಡಿದರು.
ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ವಿಶೇಷವೆಂದರೆ ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ದಸರಾ ಉತ್ಸವ ನಿಮಿತ್ತ ಅ. 3 ರಂದು ಗುರುವಾರ ಬೆಳಗ್ಗೆ 8&30 ಗಂಟೆಗೆ ಚಾಮುಂಡೇಶ್ವರಿ ದೇವಿಯ ಜಂಬು ಸವಾರಿ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಭವ್ಯ ಮೆರವಣಿಗೆಯಲ್ಲಿ ಜಂಬು ಸವಾರಿಯೊಂದಿಗೆ, ಕುಂಭ ಮೇಳ, ಒಂಟೆ, ಕುದುರೆ, ಗೊಂಬೆ ಕುಣಿತ, ಕರಡಿ ಮಜಲು, ಕೊಂಬು ಕಹಳೆಯ ಮೇಳಗಳು ಪಾಲ್ಗೊಳ್ಳುತ್ತಿದ್ದು, ಮೆರವಣಿಗೆ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾಗಿ ಆಶ್ರಮ ರಸ್ತೆಯಲ್ಲಿ ಸಾಗಿ ಐಶ್ವರ್ಯ ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಲಿದೆ ಎಂದು ಹೇಳಿದರು.
4 ರಂದು ನಿತ್ಯ ಪೂಜಾ ಕೈಂಕರ್ಯಗಳು ದೇವಿಗೆ ನಡೆಯಲಿದೆ. ಅಂದು ದಾಂಡಿಯಾ ನಡೆಯಲಿದೆ. ದಸರಾ ನಿಮಿತ್ತ ಒಂಬತ್ತು ದಿನಗಳ ಕಾಲ ಚಾಮುಂಡೇಶ್ವರಿ ದೇವಿ ಪುರಾಣ ಪ್ರವಚನ ನಡೆಯಲಿದೆ. ಒಂಬತ್ತನೇ ದಿನ ಐಶ್ವರ್ಯ ನಗರದ ಬಡಾವಣೆಯ ಜನತೆ ಸೇರಿ ಬನ್ನಿ ಮುಡಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂ ಸವಾರಿಯನ್ನು ಸರ್ಕಾರ ನಡೆಸುತ್ತಿದ್ದು, ಇಲ್ಲಿ ಐಶ್ವರ್ಯ ನಗರದ ಸುತ್ತಲಿನ ಇಪ್ಪತ್ತಕ್ಕೂ ಅಧಿಕ ಬಡಾವಣೆಯ ಜನತೆ ಸೇರಿ ಚಾಮುಂಡೇಶ್ವರಿ ದೇವಿಯ ಜಂಬು ಸವಾರಿ ಹಮ್ಮಿಕೊಂಡಿದೆ. ನಗರದ ಜನತೆ ಮೆರವಣಿಗೆಯಲ್ಲಿ ಪಾಲ್ಗೊಂಡು ಜಂಬೂ ಸವಾರಿ ಮೆರವಣಿಗೆ ಯಶಸ್ವಿಗೊಳಿಸಬೇಕು ಜೊತೆಗೆ ತಮ್ಮ ಇಷ್ಟಾನುಸಾರ ತನುಮನಧನದಿಂದ ಸಹಕರಿಸಲು ಮನವಿ ಮಾಡಿದರು.
ಕಾರ್ಯದರ್ಶಿ ನಾನಾಗೌಡ ಬಿರಾದಾರ, ಬಸವರಾಜ ಕೋರಿ, ಬಸವರಾಜ ಈಳಗೇರ ರಾಜುಗೌಡ ಪಾಟೀಲ, ಭೀಮನಗೌಡ ಬಿರಾದಾರ, ಅಶೋಕ ತಿಮಶೆಟ್ಟಿ, ಬಸವರಾಜ ಕೋರಿ, ಸದಾಶಿವ ಚಿಕರೆಡ್ಡಿ, ಮೃತ್ಯುಂಜಯ ಶಿರೂರ ಹಾಗೂ ಬಡಾವಣೆ ಹಿರಿಯರು ಉಪಸ್ಥಿತರಿದ್ದರು.