ಮೈಸೂರು: ಮೂಲಭೂತ ವಾದಿಗಳ ಕುತಂತ್ರಕ್ಕೆ ಮರುಳಾಗದೆ ಜಾತಿ ಗಣತಿ ವರದಿ ಜಾರಿಗೊಳಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಟ್ಟ ನಿಲುವು ಪ್ರದರ್ಶಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಯೋಜಕ ದೇವಗಳ್ಳಿ ಸೋಮಶೇಖರ್ ಮನವಿ ಮಾಡಿದರು.
ಜಾತಿ ಜನಗಣತಿ ವರದಿ ಸ್ವೀಕರಿಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರ ಬಗೆಗಿನ ತನ್ನ ನಿಲುವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಂಗ್ರೆಸ್ ಶೇ.80 ರಷ್ಟು ಮತಗಳು ಈ ಬಡ ವರ್ಗಗಳಿಂದಲೇ ಬಂದಿವೆ. ಹೀಗಾಗಿ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ, ಯಥಾವತ್ತಾಗಿ ಜಾರಿಗೊಳಿಸಬೇಕು. ಶೇ. 80ಕ್ಕಿಂತ ಹೆಚ್ಚು ಮತ ನೀಡಿರುವ ಈ ವರ್ಗಗಳಿಗೆ ಹೆಚ್ಚಿನ ಸ್ಥಾನಮಾನ ನೀಡುವ ಸಲುವಾಗಿ ಎಸ್‌ಸಿ, ಎಸ್‌ಟಿ ಗಳಿಗೆ 15 ರಿಂದ 18 ಸಚಿವ ಸ್ಥಾನ, ಅಲ್ಪಸಂಖ್ಯಾತರು, ಹಿಂದುಳಿದವರಿಗೆ ಐದರಿಂದ ಎಂಟು ಸ್ಥಾನ ನೀಡಬೇಕು. ಇದಕ್ಕಾಗಿ ಮಂತ್ರಿಮಂಡಲ ಮರು ರಚನೆ ಮಾಡಬೇಕು. ನಿಗಮ, ಮಂಡಳಿಗಳಲ್ಲಿಯೂ ಹೆಚ್ಚಿನ ಆದ್ಯತೆ ನೀಡಬೇಕೆಂದು ಕೋರಿದರು.
ಎಲ್ಲಿ ತಾವು ಅಲಂಕರಿಸಿದ ಅಧಿಕಾರ ಮತ್ತು ಸಾಮ್ರಾಜ್ಯ ಕೈಬಿಟ್ಟು ಹೋಗಿ ಪ್ರಜಾಪ್ರಭುತ್ವದ ಪಾಲಾಗುತ್ತದೆಯೋ, ಎಲ್ಲಿ ನಮ್ಮ ಸ್ಥಾನಮಾನಗಳು ಪಲ್ಲಟವಾಗುತ್ತವೆಯೋ ಎಂಬ ಭಯದಿಂದ ವರದಿಯನ್ನು ಕೆಲವರು ವಿರೋಧಿಸುತ್ತಿದ್ದಾರೆ. ಆದರೆ ಸಿಎಂ ಇದಕ್ಕೆ ಮರುಳಾಗಬಾರದು. ವರದಿ ಜಾರಿಗೊಳಿಸುವ ದಿಟ್ಟ ನಿಲುವು ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಅರ್ಜುನಹಳ್ಳಿ ಕಾಂತರಾಜು, ಬೆಲವತ್ತ ರಾಮಚಂದ್ರ, ಕಾರ್ಯ ಬಸವಣ್ಣ, ಪ್ರಕಾಶ್ ಹುಣಸೂರು, ಮಂಜುನಾಥ ಮುರಡಗಳ್ಳಿ, ಪ್ರಸನ್ನ ತಳೂರು ಇದ್ದರು.