

ಜಗಳೂರು: ಆರೋಗ್ಯದ ಬಗ್ಗೆ ಜಾಗೃತಿ ವಹಿಸದಿದ್ದಲ್ಲಿ ಆರೋಗ್ಯಕರ ಸಮಾಜ ನಿರ್ವಣವಾಗಲು ಸಾಧ್ಯವಿಲ್ಲ. ಗಾಳಿ, ನೀರು, ಆಹಾರ ಶುದ್ಧವಾಗಿದ್ದರೆ ಪೂರಕ, ಅಶುದ್ಧವಾದರೆ ಮಾರಕವಾಗಲಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
ತಾಲೂಕಿನ ಪಲ್ಲಾಗಟ್ಟೆ ಗ್ರಾಮದಲ್ಲಿ ಸೋಮವಾರ ಕೇಂದ್ರ ಮತ್ತು ರಾಜ್ಯ ಸರ್ಕಾರ, ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಿರಿಗೆರೆ, ಟೆಸ್ಲಾನ್ ಟೆಕ್ನಾಲಜೀಸ್ ಬೆಂಗಳೂರು, ಸರ್ಜಿ ಹೈಟೆಕ್ ಆಸ್ಪತ್ರೆ ಶಿವಮೊಗ್ಗ, ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ತಂತ್ರಜ್ಞಾನ ಆಧಾರಿತ ಆಯುಷ್ಮಾನ್ ಆರೋಗ್ಯ ಮಂದಿರವನ್ನು ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆಲ್ಲ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಬದಲಾದ ಆಹಾರ ಪದ್ಧತಿಯಿಂದ ಕೆಂಪು ಹಾಸಿಗೆ ಹಾಕಿ ರೋಗಗಳನ್ನು ಬರಮಾಡಿಕೊಳ್ಳುತ್ತಿದ್ದೇವೆ ಎಂದರು.
ಭೂಮಿಯಲ್ಲಿ ದೇವರನ್ನು ನೋಡಿದವರಿಲ್ಲ. ವೈದ್ಯರ ಮೂಲಕ ದೇವರನ್ನು ಕಾಣುತ್ತೇವೆ. ಸಾವು- ನೋವಿನಲ್ಲಿರುವಾಗ ಚಿಕಿತ್ಸೆ ನೀಡಿ ಗುಣಪಡಿಸುವ ಶಕ್ತಿ ಹೊಂದಿದ್ದಾರೆ. ಹಾಗಾಗಿ ಅವರು ಸೇವೆಯನ್ನು ಪ್ರಾಮಾಣಿಕತೆಯಿಂದ ಮಾಡಬೇಕು ಎಂದರು.
ಜಿಪಂ ಮಾಜಿ ಸದಸ್ಯ ಎಸ್.ಕೆ. ಮಂಜುನಾಥ್ ಮಾತನಾಡಿ, ಆರೋಗ್ಯ ಕೇಂದ್ರದಲ್ಲಿ ವಾರದ ಏಳು ದಿನಗಳು ನಿರಂತರವಾಗಿ ಸೇವೆ ಸಲ್ಲಿಸಬೇಕು. 108 ಆಂಬುಲೆನ್ಸ್ ವಾಹನದ ವ್ಯವಸ್ಥೆ ಕಲ್ಪಿಸಬೇಕು. ಉಚ್ಚಂಗಿಪುರ, ಜಗಳೂರು, ಪಲ್ಲಾಗಟ್ಟೆ, ಉರಲಕಟ್ಟೆ ರಸ್ತೆಗಳು ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು.
ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಡಾ.ಕೆ.ಪಿ. ಬಸವರಾಜಪ್ಪ ಮಾತನಾಡಿ, ಆರೋಗ್ಯ ಮತ್ತು ಶಿಕ್ಷಣ ನಮ್ಮ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ. ಆರೋಗ್ಯ, ಶಿಕ್ಷಣ ಮತ್ತು ಜೀವನ ಮಟ್ಟ ಚನ್ನಾಗಿದ್ದರೆ ದೇಶ, ರಾಜ್ಯ ಉತ್ತಮವಾಗಿರಲು ಸಾಧ್ಯ ಎಂದರು.
ಡಾ. ಅಶ್ವಿನಿಗೌಡ ಮಾತನಾಡಿದರು. ಜಿಲ್ಲಾ ವೈದ್ಯಾಧಿಕಾರಿ ಡಾ. ಷಣ್ಮುಖಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ವಿಶ್ವನಾಥ್, ದಾನಿ ವೈ.ಕೆ. ಬಸವರಾಜಪ್ಪ, ಡಾ. ಗಂಗಾಧರಪ್ಪ, ರಾಘವೇಂದ್ರ, ಜಿಪಂ ಮಾಜಿ ಸದಸ್ಯ ಎಸ್.ಕೆ. ಮಂಜುನಾಥ್, ಡಾ. ಬಸವಂತ್, ಡಾ.ಕೆ.ಪಿ. ಬಸವರಾಜಪ್ಪ, ಗ್ರಾಪಂ ಅಧ್ಯಕ್ಷೆ ರೇಣುಕಮ್ಮ ಗುರುಮೂರ್ತಿ, ಆಶಾ ಎಂ.ಜಿ. ಬಸವನಗೌಡ, ಡಾ. ಅರವಿಂದ್ ಹೆಗಡೆ, ಆಶಾ ಕಾರ್ಯಕರ್ತೆಯರು, ಗ್ರಾಪಂ ಸದಸ್ಯರು ಸೇರಿ ಮತ್ತಿತರರಿದ್ದರು.
ರಸ್ತೆ ಅಭಿವೃದ್ಧಿಗೆ ಆದ್ಯತೆ: ತಾಲೂಕಿನ ಪ್ರಮುಖ ರಸ್ತೆಗಳು ಹಾಳಾಗಿವೆ. ಹೊಸ ರಸ್ತೆ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳೆ ಅವರು ಜಗಳೂರು ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಜಿಪಂ ಮಾಜಿ ಸದಸ್ಯ ಎಸ್.ಕೆ. ಮಂಜುನಾಥ್ ಮನವಿಯಂತೆ ಹಂತ ಹಂತವಾಗಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.
10 ಲಕ್ಷ ರೂ. ದೇಣಿಗೆ: ಕೆಂಚಮ್ಮನಹಳ್ಳಿ ವೈ.ಕೆ. ಬಸವರಾಜ್ ಮತ್ತು ಸಹೋದರ ಎಸ್.ಕೆ. ಮಂಜುನಾಥ್ ಕುಟುಂಬವು ಪಲ್ಲಾಗಟ್ಟೆ ಆರೋಗ್ಯ ಕೇಂದ್ರಕ್ಕೆ ಸುಮಾರು 10 ಲಕ್ಷ ವೆಚ್ಚದ ತಂತ್ರಜ್ಞಾನ ಆಧಾರಿತ ಆಯುಷ್ಮಾನ್ ಆರೋಗ್ಯ ಮಂದಿರದ ಯಂತ್ರೋಪಕರಣಗಳಿಗೆ ದೇಣಿಗೆ ನೀಡಿದ್ದಾರೆ. ಇಂತಹ ಸಮಾಜ ಸೇವಾ ಮನೋಭಾವವಿರುವ ಅನೇಕರು ಮುಂದೆ ಬಂದರೆ ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಬಹುದು ಎಂದು ಶಾಸಕ ಬಿ. ದೇವೆಂದ್ರಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.